

ಚಿತ್ರದುರ್ಗ: ಕಾಂಗ್ರೆಸ್ ಜಾರಿಗೊಳಿಸಿರುವ ಜನಪರ ಗ್ಯಾರಂಟಿಗಳು ದೇಶವಷ್ಟೇ ಅಲ್ಲ, ವಿಶ್ವಕ್ಕೆ ಮಾದರಿ. ಯಾವ ಸರ್ಕಾರಗಳು ಇಂತಹ ಕಾರ್ಯಕ್ರಮ ರೂಪಿಸಿರಲಿಲ್ಲ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಬಿಜೆಪಿಯ ಭ್ರಷ್ಟಾಚಾರ ಮತ್ತು ಶ್ರೀಮಂತರ ಪರ ನೀತಿ ವಿರುದ್ಧ ಮನನೊಂದ ಜನ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ನೀಡಿದ್ದಾರೆ. ವೈಯಕ್ತಿಕ ಕೆಲಸಗಳನ್ನು ಬಿಟ್ಟು ಪಕ್ಷದ ಎಲ್ಲರೂ ಜನರಿಗಾಗಿ ಸೇವೆ ಮಾಡೋಣ ಎಂದು ಕರೆ ನೀಡಿದರು.
ರಾಜ್ಯದಲ್ಲಿ ಬಡವರ ಸ್ಥಿತಿ ಗಂಭೀರವಾಗಿದೆ. ಕಂದಾಯ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆ ಇದ್ದು, ಜನರ ಕಚೇರಿ ಅಲೆದಾಟ ತಪ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸರ್ಕಾರದ ಮೇಲೆ ವಿಶ್ವಾಸವಿಟ್ಟಿದ್ದು, ಉತ್ತಮ ಆಡಳಿತದ ನಿರೀಕ್ಷೆಗಳು ಹೆಚ್ಚಿವೆ. ಅದನ್ನು ಯಾವ ಕಾರಣಕ್ಕೂ ಹುಸಿಯಾಗಿಸದೆ ಶ್ರಮಿಸಲಿದ್ದೇವೆ ಎಂದು ಭರವಸೆ ನೀಡಿದರು.
ಇಡೀ ದೇಶದಲ್ಲಿ ಬದಲಾವಣೆ ಗಾಳಿ ಬೀಸಿದ್ದು, ಲೋಕಸಭಾ ಚುನಾವಣೆಯಲ್ಲಿ ಇಂಡಿಯಾಗೆ ಶಕ್ತಿ ತುಂಬೋಣ. ಅಲ್ಲಿ ಅಧಿಕಾರಕ್ಕೆ ಬಂದರೆ ರಾಜ್ಯಕ್ಕೂ ಅನುಕೂಲವಾಗಲಿದೆ. ಹಿಂದುಳಿದ ಚಿತ್ರದುರ್ಗ ಜಿಲ್ಲೆಯ ಜನರೂ ಆಶೀರ್ವದಿಸಿದ್ದು, ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲಿದ್ದೇವೆ ಎಂದು ಆಶ್ವಾಸನೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿಗಳಿಂದಾಗಿ ವಿರೋಧ ಪಕ್ಷದವರು ತಳಮಳಗೊಂಡಿದ್ದಾರೆ. ನುಡಿದಂತೆ ನಡೆದ ಕಾಂಗ್ರೆಸ್‌ಗೆ ಲೋಕಸಭಾ ಚುನಾವಣೆಯಲ್ಲೂ ಜನ ಬೆಂಬಲಿಸಲಿದ್ದು, ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ ಎಂದರು.
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ಜಿಲ್ಲೆಯ ಆರೂ ತಾಲೂಕು ಬರಪೀಡಿತವೆಂದು ಘೋಷಿಸಲಾಗಿದೆ. ಅಗತ್ಯ ನೆರವು ನೀಡುವುದಾಗಿ ಸಿಎಂ ಈಗಾಗಲೇ ಭರವಸೆ ನೀಡಿದ್ದು, ಕಾಂಗ್ರೆಸ್ ಆಡಳಿತ ಮಾದರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಮಹಿಳಾ ಜಿಲ್ಲಾಧ್ಯಕ್ಷೆ ಗೀತಾ ನಂದಿನಿಗೌಡ, ಮುಖಂಡರಾದ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ, ಯೋಗೀಶ್‌ಬಾಬು, ಕೆ.ಪಿ.ಸಂಪತ್‌ಕುಮಾರ್, ಡಿ.ಎನ್.ಮೈಲಾರಪ್ಪ, ಆರ್.ಕೆ.ಸರ್ದಾರ್, ಓ.ಶಂಕರ್, ಲಕ್ಷ್ಮಿಕಾಂತ್, ಡಿ.ಟಿ.ವೆಂಕಟೇಶ್, ಮೆಹಬೂಬ್ ಖಾತೂನ್, ಎನ್.ಡಿ.ಕುಮಾರ್, ಆರ್.ಪ್ರಕಾಶ್, ಸೈಯದ್ ಖುದ್ದೂಸ್, ಮುದಸಿರ್ ನವಾಜ್, ಮೊಹಿದ್ದೀನ್ ಚೋಟು ಇತರರಿದ್ದರು.