ಕಾಂಗ್ರೆಸ್‌ಗೆ ಬರಲಿದೆ ನೌಕರರ ವೇತನ ಕೊಡದ ಸ್ಥಿತಿ - ಜಗದೀಶ ಶೆಟ್ಟರ್

Jagadeesha Shetter
Published on

ಬೆಳಗಾವಿ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಅಭಿವೃದ್ಧಿ ಕೆಲಸಗಳು ಸಂಪೂರ್ಣ ಸ್ಥಗಿತಗೊಂಡಿವೆ. ಅಲ್ಲದೆ, ಅವುಗಳಿಗೆ ಅನುದಾನ ಹೊಂದಿಸಲು ಬೆಲೆ ಏರಿಕೆ ಮಾಡುತ್ತಿದೆ ಎಂದು ಸಂಸದ ಜಗದೀಶ ಶೆಟ್ಟರ್ ಆರೋಪಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದ ಬಳಿಕ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ಸಿಕ್ಕಿಲ್ಲ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನ ಸಾಮಾನ್ಯರಿಂದ ಹಣ ವಸೂಲಿ ಮಾಡುವ ಕೆಲಸಕ್ಕೆ ಕೈ ಹಾಕಿದೆ. ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದ್ದು, ಮುಂಬರುವ ದಿನಗಳಲ್ಲಿ ನೌಕರರ ವೇತನ ಕೊಡಲು ಪರದಾಡುವ ಸ್ಥಿತಿ ಬರಲಿದೆ ಎಂದು ಟೀಕಿಸಿದರು.

ಗ್ಯಾರಂಟಿ ಯೋಜನೆಗೆ ಹಣ ಹೊಂದಾಣಿಕೆ: ಸರ್ಕಾರ ಗುತ್ತಿಗೆದಾರರ 60 ಸಾವಿರ ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದು, ಅದಕ್ಕಾಗಿ ಹಾಲು, ವಿದ್ಯುತ್, ನೀರಿನ ದರ ಏಕಾಏಕಿ ಹೆಚ್ಚಳ ಮಾಡುತ್ತಿದೆ. ಹಾಲಿನ ದರ ಹೆಚ್ಚಳ ಹಣ ನೇರವಾಗಿ ರೈತರ ಖಾತೆಗೆ ಜಮೆ ಮಾಡುತ್ತೇವೆ ಎನ್ನುತ್ತಾರೆ. ಆದರೆ, ವಾಸ್ತವದಲ್ಲಿ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸುತ್ತಿದೆ ಎಂದರು.

ನೇರವಾಗಿ ಗೃಹ ಸಚಿವರಿಗೆ ದೂರು: ವಿಧಾನಸಭೆ ಅಧಿವೇಶನದಲ್ಲಿ 48 ಜನ ಶಾಸಕರ ಮೇಲೆ ಹನಿಟ್ರಾೃಪ್ ಆಗಿದೆ ಎಂದ ಸಚಿವ ಕೆ.ಎನ್.ರಾಜಣ್ಣ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡುವ ಬದಲಾಗಿ ಗೃಹ ಸಚಿವರಿಗೆ ದೂರು ಕೊಡುತ್ತಾರೆ. ಅಂದರೆ ಪೊಲೀಸರ ಮೇಲೆ ಸಚಿವರಿಗೆ ನಂಬಿಕೆ ಇಲ್ಲ ಎಂಬುದು ಅರ್ಥ. ಇನ್ಮುಂದೆ ಜನಸಾಮಾನ್ಯರು ನೇರವಾಗಿ ಗೃಹ ಸಚಿವರಿಗೆ ದೂರು ಕೊಡುವುದು ಸೂಕ್ತ ಎಂದರು.\

ಮಧ್ಯಂತರ ಚುನಾವಣೆ ಎದುರಾಗಲಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನಡುವಿನ ಅಧಿಕಾರ ಹಂಚಿಕೆ ಗಲಾಟೆ ತೀವ್ರರೂಪ ಪಡೆದುಕೊಂಡಿದ್ದು, ನಾಯಕರು ಪದೇ ಪದೆ ದೆಹಲಿ ಯಾತ್ರೆ ಕೈಗೊಂಡಿದ್ದಾರೆ. ಹೀಗಾಗಿ ಯಾವುದೇ ಸಮಯದಲ್ಲಿ ಸರ್ಕಾರ ಪತನವಾಗಬಹುದು. ಇಲ್ಲವೇ ಮಧ್ಯಂತರ ಚುನಾವಣೆ ಎದುರಾದರೂ ಅಚ್ಚರಿ ಪಡಬೇಕಿಲ್ಲ ಎಂದು ಟೀಕಿಸಿದರು.

ಶಾಸಕ ವಿಠ್ಠಲ ಹಲಗೇಕರ,ಮಾಜಿ ಶಾಸಕರಾದ ಸಂಜಯ ಪಾಟೀಲ, ಮಹಾಂತೇಶ ದೊಡಗೌಡರ, ಅರವಿಂದ ಪಾಟೀಲ, ನಗರ ಘಟಕದ ಅಧ್ಯಕ್ಷೆ ಗೀತಾ ಸುತಾರ, ಪಾಲಿಕೆ ಸದಸ್ಯ ಹನಮಂತ ಕೊಂಗಾಲಿ, ಮುರೇಂದ್ರಗೌಡ ಪಾಟೀಲ ಇತರರಿದ್ದರು.

ಬೆಲೆ ಏರಿಕೆ ಖಂಡಿಸಿ ಹೋರಾಟ: ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ, ಅವೈಜ್ಞಾನಿಕ ಆರ್ಥಿಕ ನೀತಿಯಿಂದಾಗಿ ದಿನ ಬಳಕೆ ವಸ್ತುಗಳ ಬೇಲೆ ಏರಿಕೆಯಾಗುತ್ತಿದ್ದು, ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ವಿವಿಧ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಳ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ ಜನಸಾಮಾನ್ಯರಿಂದ ಹಣ ಸುಲಿಗೆ ಮಾಡುತ್ತಿದೆ. ಸರ್ಕಾರದ ಧೋರಣೆ ಖಂಡಿಸಿ ಏ.7ರಿಂದ ಹೋರಾಟ ನಡೆಸುತ್ತಿದ್ದೇವೆ ಎಂದು ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net