ಕಾಂಗ್ರೆಸ್‌ಗಿಂತ ಅತ್ಯುತ್ತಮ ಪಕ್ಷ ಮತ್ತೊಂದಿಲ್ಲ

11 HANUR 3.
ಗುಂಡಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ನಟ, ನಿರ್ದೇಶಕ ಎಸ್.ನಾರಾಯಣ್ ಮಾತನಾಡಿದರು. ಆರ್.ನರೇಂದ್ರ, ಶಿವಕುಮಾರ್, ಚೇತನ್, ಮಾದೇಶ್, ಪುಟ್ಟರಾಜು, ಪ್ರಭು ಇತರರು ಇದ್ದರು.
Published on

ಹನೂರು: ಕಾಂಗ್ರೆಸ್‌ನ ಇತಿಹಾಸವನ್ನು ಪ್ರತಿಯೊಬ್ಬರೂ ಅರ್ಥೈಸಿಕೊಂಡಾಗ ಇದಕ್ಕಿಂತ ಅತ್ಯುತ್ತಮ ಪಕ್ಷ ಮತ್ತೊಂದಿಲ್ಲ. ಹಾಗಾಗಿ ಕಾಂಗ್ರೆಸ್ ಬೆಂಬಲಿಸುವಂತೆ ನಟ, ನಿರ್ದೇಶಕ ಎಸ್.ನಾರಾಯಣ್ ಮನವಿ ಮಾಡಿದರು.

ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿ.ಗುಂಡಾಪುರ ಗ್ರಾಮದಲ್ಲಿ ಮಂಗಳವಾರ ಕಾರ್ಯಕರ್ತರು ಹಾಗೂ ಮುಖಂಡರು ಆಯೋಜಿಸಿದ್ದ್ಧ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಆರ್.ನರೇಂದ್ರ ಪರ ಮತಯಾಚಿಸಿ ಮಾತನಾಡಿದರು.

ಸ್ವಾತಂತ್ರ್ಯ ಪೂರ್ವ ಹಾಗೂ ನಂತರದಲ್ಲೂ ಬಡವರು ಹಾಗೂ ದನಿಕರ ಪರವಾಗಿದ್ದು, ಕಷ್ಟಕ್ಕೆ ಸ್ಪಂದಿಸಿ ಹೊಟ್ಟೆಗೆ ಅನ್ನ ಕೊಟ್ಟ ಪಕ್ಷ ಕಾಂಗ್ರೆಸ್. ದೇಶದ ಅಭಿವೃದ್ಧಿಗೆ ಪಕ್ಷದ ಕೊಡುಗೆ ಅಪಾರ. ಶಾಸಕ ನರೇಂದ್ರ ಅವರ ಅಭಿವೃದ್ಧಿಯ ಕಾರ್ಯಗಳ ಬಗ್ಗೆ ತಿಳಿದಿದ್ದೇನೆ. ಈ ಬಾರಿ ಹೆಚ್ಚು ಮತಗಳ ಅಂತರದಿಂದ ನರೇಂದ್ರ ಅವರನ್ನು ಗೆಲ್ಲಿಸಬೇಕು. ಇಂತಹವರು ಗೆದ್ದರೆ ಕ್ಷೇತ್ರಕ್ಕೆ ಶಕ್ತಿ ಬಂದಂತಾಗುತ್ತದೆ, ಅಭಿವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಶಾಸಕ ಆರ್.ನರೇಂದ್ರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಭರವಸೆ ಹುಸಿಯಾಗಿದ್ದು, ವಿದ್ಯಾವಂತ ನಿರುದ್ಯೋಗಿಗಳಿಗೆ ಅನ್ಯಾಯವೆಸಗಿದ್ದಾರೆ. ಹಾಗಾಗಿ ಬಿಜೆಪಿ ಶ್ರೀಮಂತರ ಪರವಾಗಿರುವ ಸುಳ್ಳಿನ ಸರ್ಕಾರ. ಇದೀಗ ಪಾನ್‌ಕಾರ್ಡ್‌ಗೆ ಆಧಾರ್ ಸಂಖ್ಯೆ ಜೋಡಣೆ ಮಾಡಿಸಬೇಕೆಂದು ಆದೇಶಿಸಿದ್ದು, ಜನರಿಂದ 1 ಸಾವಿರ ರೂ. ಸುಲಿಗೆ ಮಾಡಲು ಮುಂದಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರನ್ನು ಸಂಕಷ್ಟಕ್ಕೆ ನೂಕಿದೆ. ಎಲ್ಲ ವಸ್ತುಗಳಿಗೂ ಜಿಎಸ್‌ಟಿ ವಿಧಿಸಿದೆ. ಮುಂದಿನ ದಿನಗಳಲ್ಲಿ ಉಸಿರಾಡುವ ಗಾಳಿಗೂ ತೆರಿಗೆ ವಿಧಿಸುವುದರಲ್ಲಿ ಆಶ್ಚರ್ಯವೇನಿಲ್ಲ. ಇತ್ತ ಕ್ಷೇತ್ರದ ಅಭಿವೃದ್ಧಿಗೆ ಕಳೆದ 4 ವರ್ಷದ ಅವಧಿಯಲ್ಲಿ ರಾಜ್ಯದ ಬಿಜೆಪಿ ಸರ್ಕಾರ ಯಾವುದೇ ಅನುದಾನ ನೀಡದೆ ಕಡೆಗಣಿಸಿದೆ. ಆದ್ದರಿಂದ ಕ್ಷೇತ್ರ ಅಭಿವೃದ್ಧಿಯಾಗಬೇಕಾದರೆ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ ಎಂದರು.
ಬೂದುಬಾಳು, ಕಾಮಗೆರೆ, ಕೊಂಗರಹಳ್ಳಿ, ಸಿಂಗಾನಲ್ಲೂರು, ಕಂಚಗಳ್ಳಿ, ಮೋಡಳ್ಳಿ, ಚಿಕ್ಕಿಂದುವಾಡಿ, ಕರಿಯನಪುರ ಹಾಗೂ ದೊಡ್ಡಿಂದುವಾಡಿ ಗ್ರಾಮಗಳಲ್ಲಿ ಮತಯಾಚಿಸಲಾಯಿತು.

ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಶಿವಕುಮಾರ್, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಚೇತನ್, ಹನೂರು ಘಟಕಾಧ್ಯಕ್ಷ ಮಾದೇಶ್, ಗ್ರಾಪಂ ಸದಸ್ಯ ಸಿ.ಪ್ರಭು, ಮುಖಂಡರಾದ ಸಿದ್ದರಾಜು, ಪುಟ್ಟರಾಜು, ರವೀಂದ್ರ, ಸಿದ್ದಲಿಂಗೇಗೌಡ, ಕುಮಾರ್, ನಾಗರಾಜು, ರಾಜೇಶ್, ಮಹದೇವ, ಪುಟ್ಟೇಗೌಡ, ಲಿಂಗೆಗೌಡ, ಮಲ್ಲೇಗೌಡ, ಹೊಂಗಯ್ಯ, ಮುತ್ತುರಾಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net