ಕಾಂಗ್ರೆಸ್ ಸೋಲಿಸುವುದಕ್ಕಾಗಿಯೇ ಬಿಜೆಪಿ ಜತೆ ಮೈತ್ರಿ

chamundeshwari_ JDS_ G.T.Devegowda MLA
Published on

ಮೈಸೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಬೇಕು ಎಂಬ ಕಾರಣಕ್ಕೆ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ಶಾಸಕರು ಒಲವು ತೋರಿದ್ದಾರೆ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.


ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಜತೆಗೆ ಹೋಗಲು ನಮಗೆ ಇಷ್ಟವಿಲ್ಲ. ಆದರೆ, ಕಳೆದ ಬಾರಿ ಕಾಂಗ್ರೆಸ್ ನಾಯಕರು ಹೊಟ್ಟೆ ಉರಿಯಿಂದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದರು. ಇದೀಗ ಕಾಂಗ್ರೆಸ್‌ನವರ ಹೊಡೆತ ತಡೆಯಲು

ಆಗುತ್ತಿಲ್ಲ. ಹೀಗಾಗಿ ಲೋಕಸಭಾ ಚುನಾವಣೆಗೆ ಬಿಜೆಪಿ ಜತೆಗೆ ಸೇರಿ ಒಟ್ಟಾಗಿ ಎದುರಿಸೋಣ ಎನ್ನುವುದು ಎಲ್ಲರ ಒಮ್ಮತದ ಅಭಿಪ್ರಾಯವಾಗಿದೆ. ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಎಚ್.ಡಿ.ದೇವೇಗೌಡರು ನಮಗೆ ಒಳ್ಳೆಯ ತೀರ್ಮಾನದ ಧೈರ್ಯ ನೀಡಿದ್ದಾರೆ ಎಂದರು.


ಎಚ್.ಡಿ.ಕುಮಾರಸ್ವಾಮಿಯಿಂದ ಬಿಜೆಪಿ ಜತೆಗೆ ಹೋಗಲು ಯಾವುದೇ ವಿರೋಧವಿಲ್ಲ. ಬಿಜೆಪಿಗೆ ಸಮರ್ಥ ಅಭ್ಯರ್ಥಿ ಎಲ್ಲಿ ಇದ್ದಾರೆ, ಜೆಡಿಎಸ್‌ಗೆ ಸಮರ್ಥ ಅಭ್ಯರ್ಥಿ ಎಲ್ಲಿದ್ದಾರೆಂದು ನೋಡಬೇಕು. ಈ ರೀತಿ ಅಳತೆಗೋಲು ಅನುಸರಿಸಿ ಮುಂದಿನ ನಿರ್ಧಾರ ಮಾಡಬೇಕು. ಸೆ.6ರಂದು ಜೆಡಿಎಸ್‌ನ 19 ಶಾಸಕರು, 7 ಜನ ವಿಧಾನ ಪರಿಷತ್‌ನ ಸದಸ್ಯರು, ಮಾಜಿ ಶಾಸಕರು, ಮುಖಂಡರ ಸಭೆ ನಡೆಯಿತು. ಎಚ್.ಡಿ.ದೇವೇಗೌಡರು, ಸಿ.ಎಂ. ಇಬ್ರಾಹಿಂ, ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ ಸೇರಿದಂತೆ ಎಲ್ಲರೂ ಭಾಗಿಯಾಗಿದ್ದರು. ಸಭೆಯಲ್ಲಿ ಹಾಜರಿದ್ದ ಬಹುತೇಕ ಶಾಸಕರು, ವಿಧಾನ ಪರಿಷತ್ ಸದಸ್ಯರು ಕಾಂಗ್ರೆಸ್ ದಬ್ಬಾಳಿಕೆ ಬಗ್ಗೆ ತಿಳಿಸಿ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ಹೇಳಿದರು.


ಪಿರಿಯಾಪಟ್ಟಣದಲ್ಲಿ ಕಾರ್ಯಕರ್ತರನ್ನು ಜೈಲಿಗೆ ಕಳಿಸಲಾಗಿದೆ. ಎಫ್‌ಐಆರ್ ದಾಖಲಾಗುತ್ತಿದೆ. ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದ್ದಾರೆ. ಜೆಡಿಎಸ್ ಕಾರ್ಯಕರ್ತರಿಗೆ ರಕ್ಷಣೆ ಸಿಗುತ್ತಿಲ್ಲ. ಗ್ಯಾರಂಟಿ ಹಿನ್ನೆಲೆಯಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತಿವೆ. ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನರು ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಾಗಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಬೇಕು ಎಂಬ ಕಾರಣಕ್ಕೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಎಲ್ಲರೂ ಒಲವು ವ್ಯಕ್ತಪಡಿಸಿದ್ದರು ಎಂದು ತಿಳಿಸಿದರು.


ಸ್ಥಾನ ಹಂಚಿಕೆ ವಿಷಯದಲ್ಲಿ ನಾನು ಕಾರ್ಯಕರ್ತರು ಹಾಗೂ ಮುಖಂಡರ ಅಭಿಪ್ರಾಯದ ಪರ ಇರುತ್ತೇನೆ. ಈ ಹಿಂದೆ ಬಿಜೆಪಿ ಜತೆಗೆ ಹೋಗಿದ್ದಕ್ಕೆ ಹುಣಸೂರು ಕ್ಷೇತ್ರದಲ್ಲಿ ನನ್ನನ್ನೇ ಜನ ಸೋಲಿಸಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಈಗ ಯಾರು ಬಿಜೆಪಿ ಜತೆಗೆ ಹೋಗಲು ವಿರೋಧ ಮಾಡುತ್ತಿಲ್ಲ. ಸೆ.10ರಂದು ಜೆಡಿಎಸ್ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನ ಮಾಡಲಾಗುವುದು. ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿರುವ ಈ ಸಮಾವೇಶಕ್ಕೆ ಹೆಚ್ಚಿನ ಜನರನ್ನು ಸೇರಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net