

ಬಸವಕಲ್ಯಾಣ: ಮಾಜಿ ಸಚಿವ, ಜೆಡಿಎಸ್ ಹಿರಿಯ ನಾಯಕ ಪಿಜಿಆರ್ ಸಿಂಧ್ಯಾ ಮಂಗಳವಾರ ಇಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು.
ಕಾಂಗ್ರೆಸ್ ಅಭ್ಯರ್ಥಿ ಮಲ್ಲಮ್ಮ ನಾಮಪತ್ರ ಸಲ್ಲಿಸಿದ ಬಳಿಕ ನಡೆದ ಬೃಹತ್ ಸಮಾವೇಶದಲ್ಲಿ ಸಿಂಧ್ಯ ಅವರನ್ನು ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಡಿ.ಕೆ.ಶಿವಕುಮಾರ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಡಾ.ಮಲ್ಲಿಕಾರ್ಜುನ ಖರ್ಗೆ ಪಕ್ಷದ ಧ್ವಜ ನೀಡಿ ಸ್ವಾಗತಿಸಿದರು.
ಮರಾಠಾ ಸಮಾಜದ ಹಿರಿಯ ಮುಖಂಡರಾದ ಸಿಂಧ್ಯಾ ಕಳೆದ ಸಲ ಇಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿ ಸೋತಿದ್ದರು. ಇವರನ್ನು ಪಕ್ಷಕ್ಕೆ ಸೆಳೆವ ಮುಖಾಂತರ ಕಾಂಗ್ರೆಸ್ ವರಿಷ್ಠರು ಕ್ಷೇತ್ರದಲ್ಲಿ 40 ಸಾವಿರಕ್ಕೂ ಹೆಚ್ಚಿರುವ ಮರಾಠಾ ಸಮಾಜದ ಮತದ ಮೇಲೆ ಕಣ್ಣು ಹಾಕಿದ್ದಾರೆ.
ಸಿದ್ದರಾಮಯ್ಯ ಮಾತನಾಡಿ, ಸಿಂಧ್ಯಾ ಹಿರಿಯ ರಾಜಕಾರಣಿ, ನನ್ನ ಸಹಪಾಠಿ. ನಾವೆಲ್ಲ ಜನತಾದಳ, ಜನತಾ ಪಾರ್ಟಿಯಲ್ಲಿ ಒಟ್ಟಿಗಿದ್ದವರು. ಕಳೆದ ಸಲ ಈ ಕ್ಷೇತ್ರದಲ್ಲಿ ಸಿಂಧ್ಯಾ ಸ್ಪರ್ಧಿಸಿದ್ದರು. ಇದೀಗ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರಿಂದ ನಮಗೆ ಇನ್ನಷ್ಟು ಶಕ್ತಿ ಬಂದಿದೆ ಎಂದರು. ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಘೋಷಣೆ ವೇಳೆ ಕನಿಷ್ಠ ಕೇಳುವ ಸೌಜನ್ಯ ಸಹ ತೋರಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ. ರಾಜ್ಯದಲ್ಲಿ ಬಡವರ ಹಾಗೂ ಎಲ್ಲರ ಹಿತ ಕಾಪಾಡುವ ಏಕೈಕ ಪಕ್ಷ ಕಾಂಗ್ರೆಸ್. ಈ ಸಿದ್ಧಾಂತ ಒಪ್ಪಿಯೇ ಕಾಂಗ್ರೆಸ್ ಸೇರಿರುವೆ. ಮಲ್ಲಮ್ಮ ಗೆಲುವಿಗಾಗಿ ಎರಡು ದಿನ ಇಲ್ಲೇ ಇದ್ದು ಪ್ರಚಾರ ನಡೆಸುವೆ. ಇಲ್ಲಿನ ಜಯ ರಾಜ್ಯ ರಾಜಕಾರಣಕ್ಕೆ ದಿಕ್ಸೂಚಿ ಆಗಲಿದೆ ಎಂದು ಸಿಂಧ್ಯಾ ವ್ಯಾಖ್ಯಾನಿಸಿದರು.