ಕಾಂಗ್ರೆಸ್ ಸಾಧನೆ ಜನತೆಗೆ ತಿಳಿಸುತ್ತೇವೆ

madan
Published on

ಹುಬ್ಬಳ್ಳಿ: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಕಾಂಗ್ರೆಸ್ ಪಕ್ಷದ ಸಾಧನೆಯನ್ನು ಪ್ರತಿಯೊಂದು ಮನೆಗೂ ತಿಳಿಸುವ ಕೆಲಸ ಮಾಡುತ್ತೇವೆ ಎಂದು ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮದನ ಕುಲಕರ್ಣಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಇಷ್ಟರಲ್ಲೇ ಅಂತಿಮಗೊಳ್ಳಲಿದೆ. ಈಗಾಗಲೇ ಕಾಂಗ್ರೆಸ್ 200 ಯುನಿಟ್ ವಿದ್ಯುತ್ ಉಚಿತ, 10 ಕೆಜಿ. ಅಕ್ಕಿ ವಿತರಣೆ, ಮಹಿಳೆಯರಿಗೆ 2 ಸಾವಿರ ಮಾಸಿಕ ಭತ್ಯೆ ನೀಡುವುದಾಗಿ ಪಕ್ಷ ಭರವಸೆ ನೀಡಿದೆ. ಈ ಕುರಿತು ಸಾಕಷ್ಟು ಪ್ರಚಾರ ಕೈಗೊಂಡು ಪಕ್ಷವನ್ನು ಪುನಃ ಅಧಿಕಾರಕ್ಕೆ ತರಲು ಪ್ರಯತ್ನಿಸಲಾಗುವುದು. ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ಜನತೆಗೆ ತಿಳಿಸಲಾಗುವುದು ಎಂದರು.

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಪ್ರಚಾರ ಕೈಗೊಂಡಿರುವುದರಲ್ಲಿ ತಪ್ಪೇನಿಲ್ಲ. ಎಲ್ಲ ಪಕ್ಷದವರು ಮಾಡುತ್ತಿದ್ದಾರೆ. ಮತದಾರರಿಗೆ ಪ್ರೀತಿಯಿಂದ ಕಾಣಿಕೆ ನೀಡುತ್ತಿದ್ದಾರೆ. ಬಿಜೆಪಿಯವರು ಸಹ ಕಾಣಿಕೆ ನೀಡುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ಎಸ್. ಸಂದಿಲಕುಮಾರ, ಇಕ್ಬಾಲ್ ನವಲೂರ, ಹು-ಧಾ ಮಹಾನಗರ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನವೀದ ಮುಲ್ಲಾ, ಪ್ರಕಾಶ ಬುರಬುರೆ, ಬಸವರಾಜ ಬೆಣಕಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net