

ಸೇಡಂ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಕೆಲಸಗಳು ವೇಗವಾಗಿ ನಡೆದಿದ್ದು, ವಿಶೇಷವಾಗಿ ಕಲ್ಯಾಣ ಕರ್ನಾಟಕದ ಪ್ರಗತಿಗೆ ಹೆಚ್ಚಿನ ಕಾಳಜಿವಹಿಸಿ ಅನುದಾನ ಒದಗಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ಬಸವೇಶ್ವರ ವೃತ್ತದಲ್ಲಿ ಲೋಕೋಪಯೋಗಿ ಇಲಾಖೆಯ ವಿವಿಧ ಕಾಮಗಾರಿಗಳಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿ, ಕಲಬುರಗಿಯಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಭಿವೃದ್ಧಿಯ ದೃಷ್ಟಿಯಿಂದ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. 46 ಯೋಜನೆಗಳಿಗೆ 11,770 ಕೋಟಿ ರೂ. ಅನುದಾನ ನೀಡುವ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಬಸವೇಶ್ವರ ವೃತದಿಂದ ವಾಸವದತ್ತಾ ಸಿಮೆಂಟ್ ಕಂಪನಿಗೆ ತೆರಳುವ ರಸ್ತೆ ಕಿರಿದಾಗಿದ್ದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಹೀಗಾಗಿ ರಸ್ತೆ ಅಗಲೀಕರಣಕ್ಕೆ ಚಾಲನೆ ನೀಡಲಾಗಿದೆ. ಇದರೊಟ್ಟಿಗೆ ಕಲಬುರಗಿ ರಸ್ತೆಯಲ್ಲಿನ ಹೊಸ ಬಡಾವಣೆಗಳಲ್ಲಿ ಸಿಸಿ ರಸ್ತೆ, ಚರಂಡಿ, ಚಿಂಚೋಳಿಗೆ ತೆರಳುವ ರಸ್ತೆಯ ನವೀಕರಣಕ್ಕೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಪುರಸಭೆ ಅಧ್ಯಕ್ಷ ವೀರೇಂದ್ರ ರುದ್ನೂರ, ತಹಸೀಲ್ದಾರ್ ಶ್ರೀಯಾಂಕಾ ಧನಶ್ರೀ, ಲೋಕೋಪಯೋಗಿ ಇಲಾಖೆ ಎಇಇ ಶಿವಶರಣ ಜೇವರ್ಗಿ, ರಾಜ್ಯ ತೋಟಗಾರಿಕೆ ಮಹಾಮಂಡಳಿ ಮಾಜಿ ಅಧ್ಯಕ್ಷ ಬಸವರಾಜ ಪಾಟೀಲ್ ಊಡಗಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಾಗೇಶ್ವರರಾವ ಮಾಲಿಪಾಟೀಲ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ್, ಕಾರ್ಮಿಕರ ಸಂಘದ ಅಧ್ಯಕ್ಷ ಸತೀಶರೆಡ್ಡಿ ಪಾಟೀಲ್, ಪುರಸಭೆ ಸದಸ್ಯರಾದ ಸಂತೋಷ ತಳವಾರ, ಸಿದ್ದು ನಾಯ್ಕೋಡಿ, ನಾಗಕುಮಾರ ಎಳ್ಳಿ, ರವೀಂದ್ರ ಜಡೇಕರ್, ಮುಖಂಡರಾದ ವಿಶ್ವನಾಥ ಪಾಟೀಲ್, ಅಬ್ದುಲ್ ಗಫೂರ್, ಯುನುಸ ಸವೇರಾ, ಗುತ್ತಿಗೆದಾರ ಬಸವರಾಜ ಸಜ್ಜನ್ ಇದ್ದರು.
ಸೇಡಂಗೆ ಪ್ಯಾರಾ ಮೆಡಿಕಲ್ ಕಾಲೇಜ್: ಸೇಡಂನಲ್ಲಿ ಈಗಾಗಲೇ ಬಿಎಸ್ಸಿ ನರ್ಸಿಂಗ್ ಕಾಲೇಜು ಆರಂಭಕ್ಕೆ ಅನುಮತಿ ದೊರೆತಿದ್ದು, ಇದಲ್ಲದೆ ಪ್ಯಾರಾ ಮೆಡಿಕಲ್ ಕಾಲೇಜು ಸಹ ಮಂಜೂರಾಗಿದೆ. ಶೀಘ್ರದಲ್ಲಿ ಕಾರ್ಯ ಆರಂಭಿಸಲಿದೆ. ಪ್ರಗತಿಯಲ್ಲಿರುವ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ವೇಗವಾಗಿ ಕೆಲಸ ಮುಗಿಸಬೇಕು ಎಂದು ಸಚಿವ ಡಾ.ಪಾಟೀಲ್ ಅಧಿಕಾರಿಗಳಿಗೆ ತಾಕೀತು ಮಾಡಿದರು.