ಕಾಂಗ್ರೆಸ್ ಸರ್ಕಾರದಲ್ಲಿ ದರ್ಶನ್ ಸಚಿವರಾಗುವುದು ಖಚಿತ : ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಡದಪುರ ಶಿವಣ್ಣ ವಿಶ್ವಾಸ

27-pnp 2
Published on



ಮಂಡ್ಯ : ಕಾಂಗ್ರೆಸ್-ರೈತಸಂಘ ಬೆಂಬಲಿತ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರು ಕಾಂಗ್ರೆಸ್ ಸರ್ಕಾರದಲ್ಲಿ ಕೃಷಿ ಸಚಿವರಾಗುತ್ತಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಡದಪುರ ಶಿವಣ್ಣ ತಿಳಿಸಿದರು.

ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯ ವಿರೇಶ ಬಾನುಲಿ ಸ್ವಾಮಿ ವಿವೇಕಾನಂದ ಮಂದಿರದಲ್ಲಿ ಕುರುಬರ ಸಂಘ(ಹಾಲುಮತ)ದ ವತಿಯಿಂದ ಶನಿವಾರ ಆಯೋಜಿಸಿದ್ದ ಸಮುದಾಯದ ಸಭೆಯಲ್ಲಿ ಮಾತನಾಡಿದರು.

ದರ್ಶನ್ ಪುಟ್ಟಣ್ಣಯ್ಯ ಅವರಿಗೆ ನೀಡುವ ಒಂದು ಮತ ಸಿದ್ದರಾಮಯ್ಯ ಅವರ ಕೈ ಬಲಪಡಿಸುತ್ತದೆ. ಹೀಗಾಗಿ ಸಮುದಾಯದ ಪ್ರತಿಯೊಬ್ಬರು ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು. ಸಮುದಾಯದ ಮತಗಳನ್ನು ಕಸಿಯಲು ಕೆಲವರು ನೀಡುವ ಸುಳ್ಳು ಭರವಸೆಗಳಿಗೆ ಕಿವಿಗೊಡಬಾರದು ಎಂದು ಸಲಹೆ ನೀಡಿದರು.


ರೈತ ಹೋರಾಟಗಾರ ಕೆ.ಎಸ್.ಪುಟ್ಟಣ್ಣಯ್ಯ ಸದನದಲ್ಲಿ ರೈತರ ಪ್ರತಿನಿಧಿಯಾಗಿ ಧ್ವನಿ ಎತ್ತುತ್ತಿದ್ದರು. ದರ್ಶನ್ ಅವರಿಗೂ ತಂದೆಯಂತೆ ದನಿ ಎತ್ತುವ ಸಾಮರ್ಥ್ಯವಿದೆ. ಈ ಬಾರಿ ರೈತ ನಾಯಕನನ್ನು ಚುನಾಯಿಸಿ ಕಳುಹಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದರು.


ಶಾಸಕ ಸಿ.ಎಸ್.ಪುಟ್ಟರಾಜು ಅವರು ಕುರುಬ ಸಮುದಾಯದ ಮತಗಳ ಓಲೈಕೆಗಾಗಿ ಸಿದ್ದರಾಮಯ್ಯ ಅವರು ಆಪ್ತರು ಎಂದು ಹೇಳಿಕೊಂಡಿದ್ದಾರೆ. ಸಿದ್ದರಾಮಯ್ಯ ವಿಶ್ವಾಸದಲ್ಲಿ ಮಾತನಾಡಿಸಬಹುದು. ಆದರೆ ರಾಜಕೀಯವಾಗಿ ಸಿದ್ದರಾಮಯ್ಯ ಮತ್ತು ಸಿ.ಎಸ್.ಪುಟ್ಟರಾಜು ಶತ್ರುಗಳಾಗಿದ್ದಾರೆ ಎಂದರು.


ಕುರುಬರ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ಮಾತನಾಡಿ, ಶಾಸಕ ಸಿ.ಎಸ್.ಪುಟ್ಟರಾಜು ಮೂರು ಬಾರಿ ಶಾಸಕರಾಗಿ, ಒಮ್ಮೆ ಸಚಿವರಾಗಿದ್ದಾರೆ. ತಮ್ಮ ಶಾಸಕತ್ವದ ಅವಧಿಯಲ್ಲಿ ಕನಕ ಭವನ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಸದನದಲ್ಲಿ ದರ್ಶನ್ ರೈತರ ಧ್ವನಿಯಾಗಿ ಮಾತನಾಡುತ್ತಾರೆ ಎಂದರು.


ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎನ್.ರವೀಂದ್ರ, ಸಮಾಜ ಸೇವಕ ಬಿ.ರೇವಣ್ಣ, ರೈತನಾಯಕಿ ಸುನೀತಾ ಪುಟ್ಟಣ್ಣಯ್ಯ, ಕುರುಬರ ಸಂಘದ ತಾಲೂಕು ಅಧ್ಯಕ್ಷ ಹಾರೋಹಳ್ಳಿ ಹುಚ್ಚೇಗೌಡ, ಬನ್ನಂಗಾಡಿ ರೇವಣ್ಣ, ಕೆ.ಟಿ.ಗೋವಿಂದೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net