

ಶ್ರೀರಂಗಪಟ್ಟಣ: ಆರ್‌ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಬಲಿಯಾದ 11 ಮಂದಿ ಜೀವಗಳಿಗೆ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗೃಹಮಂತ್ರಿ ಜಿ.ಪರಮೇಶ್ವರ್ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲೂಕು ಕಚೇರಿ ಮುಂಭಾಗ ಜಮಾವಣೆಗೊಂಡ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಧರಣಿ ನಡೆಸಿ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.
ಬಿಜೆಪಿ ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದೌರ್ಜನ್ಯ ಹಾಗೂ ದಬ್ಬಾಳಿಕೆಯ ದುರಾಡಳಿತ ನೀಡುತ್ತಿದ್ದು, ತನ್ನ ಸ್ವಾರ್ಥ ಪ್ರಚಾರಕ್ಕಾಗಿ ಖಾಸಗಿ ಮಾಲೀಕತ್ವದ ಕ್ರಿಕೆಟ್ ಸಂಸ್ಥೆಯನ್ನು ಸನ್ಮಾನಿಸಲು ಸರ್ಕಾರವನ್ನು ದುರ್ಬಳಕೆ ಮಾಡಿದೆ. ಇಂತಹ ಕಾರ್ಯಕ್ರಮದ ತರಾತುರಿಯ ಆಯೋಜನೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ನೀಡಿದ ಸಲಹೆ ಮತ್ತು ನಿರ್ದೇಶನಗಳನ್ನು ಗಾಳಿಗೆ ತೂರಿದ ಕಾರಣದಿಂದಲೇ 11 ಜನರ ಬಲಿ ಪಡೆಯಲು ನೇರ ಕಾರಣವಾಗಿದ್ದಾರೆ. ಆದರೆ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸುವ ಮೂಲಕ ದುರಾಡಳಿತ ತೋರಿರುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಗೃಹಮಂತ್ರಿ ಜಿ.ಪರಮೇಶ್ವರ್ ತಮ್ಮ ಸ್ಥಾನಗಳನ್ನು ತೊರೆಯಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಟಿ.ಶ್ರೀಧರ್ ಮಾತನಾಡಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಯುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಕೊಲೆ, ಸುಲಿಗೆ, ಅತ್ಯಾಚಾರ ಹಾಗೂ ಕೋಮು ಸಂಘರ್ಷ ಹೆಚ್ಚಲು ಕಾರಣವಾಗಿದೆ. ಕಾಲ್ತುಳಿತ ಪ್ರಕರಣದ ಜವಾಬ್ದಾರಿ ಹೊರದ ಸಿಎಂ ಸಿದ್ದರಾಮಯ್ಯ, ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳದ ಉದಾಹರಣೆ ನೀಡಿ ನುಳುಚಿಕೊಳ್ಳುವ ಯತ್ನದ ಮೂಲಕ ತಮ್ಮ ಹೊಣೆಗೇಡಿತನ ಪ್ರದರ್ಶಸಿದ್ದಾರೆ. ರಾಜ್ಯ ಸರ್ಕಾರ ತನ್ನ ತಪ್ಪು ಅರಿತು ಮೃತ 11 ಜನರ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ರೈತ ನಾಯಕ ಕೆ.ಎಸ್.ನಂಜುಂಡೇಗೌಡ, ಬಿಜೆಪಿ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಮಾತನಾಡಿದರು. ಬೇಡಿಕೆಗಳ ಈಡೇರಿಕೆಯ ಮನವಿ ಪತ್ರವನ್ನು ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದರು. ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಬಿ.ಸಿ.ಸಂತೋಷ್ ಕುಮಾರ್, ನಂದೀಶ್, ರೈತ ಮೋರ್ಚಾ ಅಧ್ಯಕ್ಷ ಸತೀಶ್, ಮುಖಂಡರಾದ ಇಂದ್ರಕುಮಾರ್, ಚಂದಗಾಲು ಶಂಕರ್, ಬಿ.ಸಿ.ಕೃಷ್ಣೇಗೌಡ, ಪ್ರಭಾಕರ್, ಪುಟ್ಟರಾಮು, ಉಮೇಶ್ ಕುಮಾರ್, ಎಂ.ವಿ.ಕೃಷ್ಣ, ಹೇಮಂತ್, ಸುನೀಲ್, ಕಿರಣ್ ಕುಮಾರ್ ಸಿಂಗ್, ಪುಟ್ಟಮಾದು ಮಂಜುನಾಥ್, ಮಹಿಳಾ ಮೋರ್ಚಾದ ಫಾತಿಮಾ ಖಾನ್, ಗಾಯತ್ರಿ , ದೇವಿರಮ್ಮ, ಮಂಜುಳಾ, ಶಕುಂತಲಾ ಇದ್ದರು.