ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
Published on

ಹಾಸನ : ಕಾಂಗ್ರೆಸ್ ಸರ್ಕಾರದ ವಿರುದ್ಧ ಭಾರತೀಯ ಬಿಜೆಪಿ ನಗರ ಮಂಡಲ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಇದೇ ವೇಳೆ ಮಾತನಾಡಿದ ಬಿಜೆಪಿ ಮುಖಂಡ ದೇವರಾಜೇಗೌಡ, ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕಾಂಗ್ರೆಸ್ ಹೊರ ರಾಜ್ಯಗಳ ಚುನಾವಣೆಗೆ ಫಂಡಿಂಗ್ ಮಾಡಲು ರಾಜ್ಯವನ್ನು ಲೂಟಿ ಮಾಡುತ್ತಿದೆ. ಪಂಚರಾಜ್ಯ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಗುತ್ತಿಗೆದಾರ ಅಂಬಿಕಾಪತಿ ಮನೆಯಲ್ಲಿ ಸಿಕ್ಕಿರುವ 42 ಕೋಟಿ ರೂ. ಕಾಂಗ್ರೆಸ್‌ನ ಎಟಿಎಂ ಆಗಿದ್ದು, ಗುತ್ತಿಗೆದಾರರ ಬಳಿ ಕೋಟ್ಯಂತರ ರೂ. ಕಮಿಷನ್ ಪಡೆಯುತ್ತಿರುವುದು ಇದರಿಂದ ಸಾಬೀತಾಗಿದೆ. ಐಟಿ ದಾಳಿಯಲ್ಲಿ ಸಿಕ್ಕಿರುವ ಹಣ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಕಮಿಷನ್ ಹಣ. ರಾಜ್ಯ ಸರ್ಕಾರ ಈಗ ಕಾಂಗ್ರೆಸ್ ಪಕ್ಷಕ್ಕೆ ಎಟಿಎಂ ಆಗಿದೆ. ರಾಜ್ಯದ ಜನರ ಶ್ರಮದ ಹಣವನ್ನು ಪಂಚ ರಾಜ್ಯಗಳ ಚುನಾವಣೆ ಖರ್ಚಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ನೀಡುತ್ತಿದೆ ಎಂದು ದೂರಿದರು.

ಒಕ್ಕಲಿಗರ ವಿರುದ್ಧ ಪ್ರೊ.ಕೆ.ಎಸ್. ಭಗವಾನ್ ನೀಡಿರುವ ಹೇಳಿಕೆ ಖಂಡಿಸಿದ ದೇವರಾಜೇಗೌಡ, ಭಗವಾನ್ ಒಕ್ಕಲಿಗರ ಕ್ಷಮೆಯಾಚಿಸಬೇಕು. ಜತೆಗೆ ಇವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ದಸರಾ ಉತ್ಸವಕ್ಕೆ ನೀಡಿರುವ ಆಹ್ವಾನವನ್ನು ರದ್ದುಗೊಳಿಸುವಂತೆ ಒತ್ತಾಯಿಸಿದರು.

ಈಗಾಗಲೇ ರಾಜ್ಯದಲ್ಲಿ ನೀರಿನ ಅಭಾವ ಉಂಟಾಗಿದೆ. ಇದರ ಜತೆಗೆ ಲೋಡ್ ಶೆಡ್ಡಿಂಗ್ ಮಾಡುವ ಮೂಲಕ ವಿದ್ಯುತ್ ಸಮಸ್ಯೆ ಎದುರಾಗಿದೆ. ಕಾಂಗ್ರೆಸ್ ಸರ್ಕಾರದ ಹೊಡೆತ ತಾಳಲಾರದೆ ಜನರು ನೆರೆ ರಾಜ್ಯದ ಗುಳೆಹೋಗುತ್ತಿದ್ದಾರೆ. ಸರ್ಕಾರ ಆಡಳಿತಕ್ಕೆ ಬಂದ ನಾಲ್ಕೇ ತಿಂಗಳಲ್ಲಿ ನಾನಾ ಸಮಸ್ಯೆಗಳು ಎದುರಾಗಿವೆ. ರೈತರಿಗೆ ನೀಡುತ್ತಿದ್ದ ತ್ರಿ ಫೇಸಿಂಗ್ ವಿದ್ಯುತ್‌ನಲ್ಲೂ ಕಡಿತ ಮಾಡಲಾಗಿದೆ ಎಂದರು.

ಪ್ರತಿಭಟನೆಯಲ್ಲಿ ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ವೇದಾವತಿ, ಮುರಳಿ, ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net