ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ಅಂಟಿದ ಶಾಪ

WhatsApp Image 2024-07-20 at 5.31.27 PM
Published on

ಬಳ್ಳಾರಿ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದಲಿತ ವಿರೋಧಿಯಾಗಿದ್ದು, ಅಧಿಕಾರ ವಹಿಸಿಕೊಂಡ ಕೆಲ ತಿಂಗಳಲ್ಲಿಯೇ ಹಲವು ಹಗರಣಗಳು ಬಯಲಿಗೆ ಬಂದಿವೆ. ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ಅಂಟಿದ ಶಾಪ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಳಿ ನಡೆಸಿದರು.
ಸಂಡೂರಿನ ವಂಡರ್ ವ್ಯಾಲಿ ರೆಸಾರ್ಟ್‌ನಲ್ಲಿ ಬಿಜೆಪಿ ಘಟಕಾದಿಂದ ಶನಿವಾರ ನಡೆದ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು. ರಾಜ್ಯದ ಬಡವರು, ರೈತರು ಕಣ್ಣೀರು ಹಾಕುತ್ತಿದ್ದಾರೆ. ದೇವರು ನಿಮಗೆ ಖಂಡಿತವಾಗಿ ಒಳ್ಳೆಯದು ಮಾಡುವುದಿಲ್ಲ, ಅವರ ಶಾಪ ನಿಮಗೆ ತಟ್ಟದೆ ಇರುವುದಿಲ್ಲ. ನೀವು ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ, ಸಿಎಂ ಸ್ಥಾನಕ್ಕೆ ನೀವು ರಾಜೀನಾಮೆ ನೀಡುವ ದಿನ ಸಮೀಪದಲ್ಲಿದೆ ಸಿಎಂ ವಿರುದ್ಧ ಎಂದು ಕಿಡಿಕಾರಿದರು. ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಹಣವನ್ನು ಪಕ್ಷದ ರಾಜ್ಯದ ವಿಧಾನಸಭಾ ಹಾಗೂ ಜಿಲ್ಲೆಯ ಲೋಕಸಭಾ ಚುನಾವಣೆಯಲ್ಲಿ ಹೆಂಡ ಖರೀದಿಸಲು ಬಳಸಲಾಗಿದೆ ಎಂದು ಕೇಂದ್ರ ಇಡಿ ತನಿಖಾ ಸಂಸ್ಥೆ ಬಹಿರಂಗ ಪಡಿಸಿದೆ. ಆರಂಭದಲ್ಲಿ ವಾಲ್ಮೀಕಿ ಹಗರಣಕ್ಕೂ ಸರ್ಕಾರಕ್ಕೂ ಸಂಬಂಧವೇ ಇಲ್ಲ ಎಂದು ಹೇಳಿದಿರಿ. ಆದರೆ, ವಿಧಾನಮಂಡಲದಲ್ಲಿ ನಿಲುವಳಿ ಸೂಚನೆ ಮಂಡಿಸಿದಾಗ ಹಗರಣ ಆಗಿದೆ ಎಂದು ಒಪ್ಪಿಕೊಂಡರು. ಹಾಗದರೆ, ಬಳಿಕ ಅಧಿಕಾರಿಗಳು ಹಗರಣ ಮಾಡಿದ್ದಾರೆ ಎಂದಿರಿ. ಒಂದು ರಾಜ್ಯದ ಸಿಎಂ ಅಸಮರ್ಥರಾಗಿದ್ದೇರೆ ಮಾತ್ರ ಅಧಿಕಾರಿಗಳು ಸದುಪಯೋಗಪಡೆದುಕೊಂಡು ಹಗರಣ ಮಾಡಬಹುದು. ಇಲ್ಲವೇ, ಸಿಎಂ ಅಥವಾ ಸಚಿವರ ಮೌಖಿಕ ಒಪ್ಪಿಗೆ ಮೇರೆಗೆ ಹಗರಣ ನಡೆದಿರಬೇಕು. ನೀವು ಜವಾಬ್ದಾರಿ ಸ್ಥಾನದಲ್ಲಿ ಕುಳಿತು ಬೇಜವಾಬ್ದಾರಿತನದ ಹೇಳಿಕೆ ನೀಡಬಾರದು, ನೈತಿಕ ಹೊಣೆ ಹೊತ್ತು ಕೂಡಲೇ ಸಿಎಂ ರಾಜೀನಾಮೆ ನೀಡಬೇಕು ಎಂದು ಹೇಳಿದರು. ಇಷ್ಟು ದೊಡ್ಡ ಹಗರಣದಲ್ಲಿ ಸರ್ಕಾರವೇ ಭಾಗಿಯಾಗಿದ್ದರೂ, ಬಿಜೆಪಿಯ ಗೊಡ್ಡು ಬೆದರಿಕೆಗೆ ಬಗ್ಗುವುದಿಲ್ಲ, ಜಗ್ಗುವುದಿಲ್ಲ , ಬಿಜೆಪಿ ಸರ್ಕಾರದ ಹಿಂದಿನ ಹಗರಣ ತನಿಖೆ ಮಾಡುತ್ತೇವೆ ಎಂದು ಅಹಂಕಾರದ ಮಾತುಗಳನ್ನು ಹೇಳುತ್ತಿದ್ದಾರೆ. ಮುಖ್ಯಮಂತ್ರಿಗಳೇ ನಿಮ್ಮ ಪಾಪದ ಕೊಡ ತುಂಬಿದೆ. ರಾಜ್ಯದ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗದವರು ವಿಶ್ವಾಸವಿಟ್ಟು ನಿಮಗೆ 136 ಸ್ಥಾನ ನೀಡಿದವರಿಗೆ ಅನ್ಯಾಯ ಮಾಡಿದ್ದೀರಿ ಎಂದರು. ಮಾಜಿ ಸಚಿವ ಬಿ. ನಾಗೇಂದ್ರ ಮನೆ ಮೇಲೆ ಇಡಿ ದಾಳಿಯಾದರೆ ಐವರು ಸಚಿವರು ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ಆರೋಪಗಳನ್ನು ಮಾಡಿದರು. ಇಡಿ ಬಿಜೆಪಿಯ ಕೈಗೊಂಬೆಯಾಗಿದೆ, ಮುಖ್ಯಮಂತ್ರಿ ಹೆಸರು ಹೇಳಲು ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು. ಅದನ್ನು ಮುಖ್ಯಮಂತ್ರಿಯೂ ವಿಧಾನಸಭೆಯಲ್ಲಿ ಉಲ್ಲೇಖಿಸುತ್ತಾರೆ. ಹಗರಣದ ವಿಚಾರವಾಗಿ ಸದನದಲ್ಲಿ ಮುಖ್ಯಮಂತ್ರಿಯನ್ನು ನಾವು ಪ್ರಶ್ನೆ ಮಾಡುತ್ತಿದ್ದರೆ ಅವರು ತಡವರಿಸಿದರು. ಸಿಎಂ ಪರವಾಗಿ ಯಾವ ಶಾಸಕರೂ ಬೆಂಬಲವಾಗಿ ನಿಲ್ಲಲಿಲ್ಲ. ಆಡಳಿತ ಪಕ್ಷದ ಶಾಸಕರೇ ಸಿದ್ದರಾಮಯ್ಯ ಆತಂಕ ನೋಡಿ ಗಲಿಬಿಲಿಯಾದರು ಎಂದು ಗೇಲಿ ಮಾಡಿದರು. ರಾಜ್ಯದಲ್ಲಿ 14 ತಿಂಗಳಲ್ಲಿ ಭಾರಿ ಭ್ರಷ್ಟಾಚಾರದ ಆಗಿದೆ. ಬಿಜೆಪಿಯವರು ಸುಮ್ಮನೆ ಕೂರುವುದಿಲ್ಲ ಎಂದು ಮುಖ್ಯಮಂತ್ರಿಗೆ ಮನವರಿಕೆಯಾಗಿದೆ. ಹೀಗಾಗಿ ಮುಖ್ಯಮಂತ್ರಿ ಆತಂಕದಲ್ಲಿದ್ದಾರೆ. ಮೈಸೂರಿನ ಮುಡಾ ಹಗರಣ ಬಯಲಿಗೆಳೆದ ಆರ್‌ಟಿಐ ಕಾರ್ಯಕರ್ತರಿಗೆ ಕಿರುಕುಳ ಕಾಂಗ್ರೆಸ್ ಕಾರ್ಯಕರ್ತರ ಮೂಲಕ ಕಿರುಕುಳ ನೀಡಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಿರಿ ಎಂದು ಆರೋಪಿಸಿದರು. ರಾಜ್ಯದಲ್ಲಿ ಡೆಂೆ ಪ್ರಕರಣ ದಿನ ನಿತ್ಯ ಹೆಚ್ಚಾಗುತ್ತಿವೆ. ಆರೋಗ್ಯ ಸಚಿವ ಎಸಿ ರೂಮ್‌ನಲ್ಲಿ ಕುಳಿತು ಡೆಂೆ ಪ್ರಕರಣ ಕಡಿಮೆ ಮಾಡುವುದಾಗಿ ಹೇಳುತ್ತಿದ್ದಾರೆ. ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಪರಿಶಿಷ್ಟ ಜಾತಿ, ಪಂಗಡಗಳ ನಿಧಿಯ 26 ಸಾವಿರ ಕೋಟಿ ರೂ. ಹಣ ಗ್ಯಾರಂಟಿಗೆ ವರ್ಗಾವಣೆಯಾಗಿದೆ. ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತುಕೊಳ್ಳಲು ಸಿದ್ದರಾಮಯ್ಯ ನೈತಿಕತೆ ಕಳೆದುಕೊಂಡಿದ್ದಾರೆ ಎಂದರು.

ವಾಚ್ ಹಗರಣ ಪ್ರಸ್ತಾಪ : 2014ರಲ್ಲಿ ವಾಚ್ ಹಗರಣದಲ್ಲಿ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಅತಂಕದಲ್ಲಿದ್ದರು. ಈಗ ಅದೇ ಅತಂಕ ವಾಲ್ಮೀಕಿ ಹಗರಣದಲ್ಲಿಯೂ ಕಾಡುತ್ತಿದೆ ಎಂದು ವಿಜಯೇಂದ್ರ ವಾಚ್ ಹಗರಣವನ್ನು ಪ್ರಸ್ತಾಪಿಸಿದರು.
ನಾಡು ಕಂಡು ಅತ್ಯುತ್ತಮ ನಾಯಕ : ರಾಜ್ಯದಲ್ಲಿ ಹಲವು ಸರ್ಕಾರಗಳ ನಾಯಕರು ಆಡಳಿತ ನಡೆಸಿದ್ದಾರೆ. ಆದರೆ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಾದ್ಯಂತ ಪಾದಯಾತ್ರೆ, ಸೈಕಲ್ ಯಾತ್ರೆ ಹಾಗೂ ಹಲವು ಹೋರಾಟಗಳನ್ನು ನಡೆಸಿ ನಗರಕ್ಕೆ ಸೀಮಿತವಾಗಿದ್ದ ಬಿಜೆಪಿಯನ್ನು ದಕ್ಷಿಣ ಭಾರತದ ಹೆಬ್ಬಾಗಿಲುಯಾಗಿ ಬೆಳೆಸಿದ್ದಾರೆ. ಸಿಎಂ ಯಡಿಯೂರಪ್ಪ ಅಧಿಕಾರದ ವೇಳೆ ರಾಜ್ಯಕ್ಕೆ ನೆರೆ ಬಂದ ವೇಳೆ ಒಬ್ಬರೇ ರಾಜ್ಯಾದ್ಯಂತ ಭೇಟಿ ನೀಡಿ ನೆರೆ ಸಂತ್ರಸ್ಥರಿಗೆ ಪರಿಹಾರ ನೀಡಿದವರು ಎಂದರು
ಕಾರ್ಯಕರ್ತರಿಗೆ ಕಿವಿ ಮಾತು : ಬಿಜೆಪಿ ಕಳೆದ ಹಲವು ವರ್ಷಗಳಿಂದ ಕೇಂದ್ರ ಹಾಗೂ ವಿವಿಧ ರಾಜ್ಯಗಳಲ್ಲಿ ಅಧಿಕಾರ ವಹಿಸಿಕೊಂಡಿದೆ ಎಂದರೆ ಅದಕ್ಕೆ ಮುಖ್ಯ ಕಾರಣನೇ ಕಾರ್ಯಕರ್ತರು. ವೇದಿಕೆ ಮೇಲೆ ಕುಳಿತ ಮುಖಂಡರಿಗೆ ಹಾಗೂ ವೇದಿಕೆ ಮುಂಭಾಗದಲ್ಲಿ ಕುಳಿತ ಕಾರ್ಯಕರ್ತರಿಗೆ ಏನು ವ್ಯತ್ಯಾಸವಿಲ್ಲ. ಮುಂಭಾಗದಲ್ಲಿನ ಕಾರ್ಯಕರ್ತರ ಶ್ರಮದಿಂದ ವೇದಿಕೆ ಹತ್ತಿದ್ದೇವೆ ಹೊರತು ಬೇರೆ ಯಾವ ಕಾರಣದಿಂದ ಅಲ್ಲ. ಅಧಿಕಾರ ಬಂದ ಕೂಡಲೇ ಕಾರ್ಯಕರ್ತರನ್ನು ಮರೆತ,ೆ ಅವರು ರಾಜಕೀಯಲ್ಲಿ ಬೆಳೆಯಲು ಸಾಧ್ಯವಿಲ್ಲ, ಎಲ್ಲರನ್ನು ಒಮ್ಮತದಿಂದ ಪಕ್ಷ ಸಂಘಟಿಸಿ ಎಂದು ಕಿವಿ ಮಾತು ಹೇಳಿದರು.

ಬಿಜೆಪಿಯಿಂದ ಅಭಿವೃದ್ಧಿ : ಒಂದು ಕಾಲದಲ್ಲಿ ಬಳ್ಳಾರಿ ಬಿಜೆಪಿಯ ಭದ್ರಕೋಟೆಯಾಗಿತ್ತು. ಬಳ್ಳಾರಿ ಅಭಿವೃದ್ಧಿ ಬಿಜೆಪಿಯಿಂದ ಹೊರೆತು ಕಾಂಗ್ರೆಸ್ ಪಕ್ಷದಿಂದ ಅಲ್ಲ . ಆದ್ದರಿಂದ, ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಪಕ್ಷದಿಂದ ಯಾರೇ ಅಭ್ಯರ್ಥಿಯಾದರೂ, ಕಾರ್ಯಕರ್ತರೆಲ್ಲರೂ ಒಮ್ಮನಸಿನಿಂದ ದುಡಿಯಬೇಕು. ಮೋದಿಯೇ ಅಭ್ಯರ್ಥಿಯೆಂದು ಭಾವಿಸಿ ದುಡಿಯಬೇಕು ಎಂದು ಮನವಿ ಮಾಡಿದರು. ಜತೆಗೆ, ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಯಲ್ಲೂ ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಸಲಹೆ ನೀಡಿದರು.
ಮಾಜಿ ಸಂಸದ ವೈ.ದೇವೆಂದ್ರಪ್ಪ, ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಮುಖ್ಯ ಸುಚೇತಕ ಎನ್. ರವಿಕುಮಾರ, ರಾಮಲಿಂಗಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net