ಕಾಂಗ್ರೆಸ್ ಶಾಸಕರಲ್ಲೇ ಅಸಮಾಧಾನವಿದೆ: ಜಿ.ಟಿ.ದೇವೇಗೌಡ

mysore
Published on

ಮೈಸೂರು: ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡದ ಬಗ್ಗೆ ಕಾಂಗ್ರೆಸ್‌ನ 30ಕ್ಕೂ ಹೆಚ್ಚು ಶಾಸಕರಲ್ಲಿಯೇ ಅಸಮಾಧಾನವಿದೆ. ಇನ್ನು ಬಿಜೆಪಿ, ಜೆಡಿಎಸ್ ಶಾಸಕರಿಗೂ ಬೇಸರವಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಗ್ಯಾರಂಟಿ ಯೋಜನೆಗಳಿಗೆ ಹಣ ಕ್ರೋಡೀಕರಣ ಮಾಡಲು ಸರ್ಕಾರ ಮುಂದಾಗಿದ್ದು, ಇತರ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುತ್ತಿಲ್ಲ. ಸರ್ಕಾರಕ್ಕೆ ಆದಾಯ ಸಂಗ್ರಹಿಸಲು ಯಾವುದೇ ಸಮಸ್ಯೆಯಿಲ್ಲ. ಯಾವುದಾದರು ಮೂಲದಿಂದ ಹಣ ಸಂಗ್ರಹಿಸಬಹುದು ಎಂದರು.
ರಾಜ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ನೀಡಿದ್ದರೆ ನಾನು ಸಹ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಮೆಚ್ಚುಗೆವ್ಯಕ್ತಪಡಿಸುತ್ತಿದ್ದೆ. ಮುಂದಿನ ದಿನಗಳಲ್ಲಾದರೂ ಅನುದಾನ ಕೊಡುತ್ತಾರೆ ಎಂಬ ವಿಶ್ವಾಸವಿದೆ, ಕಾದು ನೋಡೋಣ ಎಂದು ಹೇಳಿದರು.
ಕಾಂಗ್ರೆಸ್‌ನಲ್ಲಿ 135 ಶಾಸಕರು ಇರುವುದರಿಂದ ಸರ್ಕಾರ ಬೀಳಿಸಲು ಆಗುತ್ತದೆಯೇ? ಅಲ್ಲದೆ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ದೇವೇಗೌಡರು ಯಾವುದೇ ಸರ್ಕಾರ ಬೀಳಿಸಿಲ್ಲ. ಸರ್ಕಾರ ಬೀಳಿಸುವ ಯತ್ನವನ್ನೂ ಮಾಡುವುದಿಲ್ಲ. ಬದಲಿಗೆ ಸರ್ಕಾರ ಹಳಿ ತಪ್ಪಿದಾಗ ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿಯೂ ಅದನ್ನು ಮುಂದುವರಿಸುತ್ತಾರೆ. ಕುಮಾರಸ್ವಾಮಿ ಅವರ ಹೋರಾಟಕ್ಕೆ ಸದಾ ನಮ್ಮ ಬೆಂಬಲ ಇದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net