ಕಾಂಗ್ರೆಸ್ ವಿರುದ್ಧ ಸಲ್ಲದ ಆರೋಪ: ಜೈರಾಮ್ ರಮೇಶ್

Published on

ಮೈಸೂರು: ಸಾಧನೆ ಹೇಳಿಕೊಳ್ಳಲು ಆಗದ ಬಿಜೆಪಿ ಸುಮ್ಮನೆ ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದೆ ಎಂದು ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್ ಟೀಕಿಸಿದರು.
ಪ್ರಧಾನಿ ಮೋದಿ ಆಡಳಿತ ನಡೆಸುವ ಬದಲು ಚುನಾವಣಾ ಪ್ರಚಾರದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಬೇಕಿದ್ದರೆ ಗ್ರಾಮ ಪಂಚಾಯಿತಿ ಚುನಾವಣೆಗೂ ಅವರು ಬರುತ್ತಾರೆ. ಹೀಗಾಗಿ ಆಡಳಿತ ಯಂತ್ರ ಕುಸಿತಗೊಂಡಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕರ್ನಾಟಕಕ್ಕೆ ನೀಡುತ್ತಿರುವ ಅನುದಾನದಲ್ಲಿ ಶೇ.94ರಷ್ಟು ಅನುದಾನ ರಾಜ್ಯದ್ದೇ ಅಗಿದೆ. ಹಾಗಾಗಿ ಸಂವಿಧಾನ ಪ್ರಕಾರ ಬರಬೇಕಾದ ಪಾಲು ಸಿಗುತ್ತಿದೆಯೇ ವಿನಹ ಇದರಲ್ಲಿ ನರೇಂದ್ರಮೋದಿ ಅವರ ವಿಶೇಷ ಕೃಪೆ ಏನೂ ಇಲ್ಲ. ಹೀಗಾಗಿ ಯಾವುದೇ ಯೋಜನೆಗಳನ್ನು ನೀಡದೆ ಕೇವಲ ಕಾಂಗ್ರೆಸ್ ಅನ್ನು ಗುರಿಯಾಗಿಸಿಕೊಂಡು ಟೀಕೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯಗಳ ಸಹಕಾರ ಸಂಸ್ಥೆಗಳನ್ನು ಬಂದ್ ಮಾಡಿ, ಅವನ್ನು ಗುಜರಾತ್ ಸಂಸ್ಥೆಗಳ ಅಡಿಗೆ ತರುವ ಹುನ್ನಾರ ನಡೆದಿದೆ. ಆದ್ದರಿಂದ ರೈತರು ಎಚ್ಚರ ವಹಿಸಬೇಕು ಎಂದರು.
ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯಿಂದ ಕಾಂಗ್ರೆಸ್‌ಗೆ ಸಂಜೀವಿನಿ ದೊರೆತಂತಾಗಿದೆ. ಪಕ್ಷದ ಸಂಘಟನೆಯಲ್ಲಿ ಒಗ್ಗಟ್ಟು ಮೂಡಿದೆ. ಡಬಲ್ ಇಂಜಿನ್ ಸರ್ಕಾರ ಎಂದು ಬಿಜೆಪಿ ಕೇವಲ ಪ್ರಚಾರ ಪಡೆಯುತ್ತಿದೆ. ಆದರೆ ರಾಜ್ಯ ಸರ್ಕಾರ ಕೇವಲ ಕೇಂದ್ರದ ಕೈಗೊಂಬೆಯಾಗಿದೆ. ಆದ್ದರಿಂದ ಈ ಸರ್ಕಾರ ಬೇಡ ಎಂದು ಹೇಳಿದರು.
ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಜೈರಾಮ್ ರಮೇಶ್ ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಬಿ.ಜೆ. ವಿಜಯಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net