

ಗುಂಡ್ಲುಪೇಟೆ: ಅನುಮತಿ ಪಡೆಯದೆ ಪ್ರಚಾರಕ್ಕೆ ವಾಹನಗಳನ್ನು ಬಳಕೆ ಮಾಡಿದ್ದ ಕಾರಣಕ್ಕೆ ಚುನಾವಣಾಧಿಕಾರಿ ಕಾಂಗ್ರೆಸ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಕುಲಗಾಣ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಎಂ.ಗಣೇಶ ಪ್ರಸಾದ್ ಪರ ಪ್ರಚಾರ ನಡೆಸಲು ಕೆ.ಎ.9 ಎಎ 4783 ಸಂಖ್ಯೆಯ ಟಾಟಾ ಏಸ್ ವಾಹನ ಬಳಸಲಾಗಿತ್ತು. ಆದರೆ ಇದಕ್ಕೆ ಅನುಮತಿ ಪಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪ್ಲೇಯಿಂಗ್ ಸ್ಕ್ವಾಡ್ ಅಧಿಕಾರಿಗಳು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ನ್ಯಾಯಾಲಯದ ಅನುಮತಿ ಪಡೆದ ಪೊಲೀಸರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಕುಮಾರಸ್ವಾಮಿ ಎಂಬುವರ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.
ತಾಲೂಕಿನ ಶ್ಯಾನಾಡ್ರಹಳ್ಳಿ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರಾದ ಚನ್ನಬಸಪ್ಪ, ನಾಗರಾಜು, ಬಸವೇಗೌಡ, ಪುಟ್ಟಸ್ವಾಮಿ ಎಂಬುವರು ಮನೆ ಮನೆಗೆ ತೆರಳಿ ಗ್ಯಾರಂಟಿ ಕಾರ್ಡ್ ನೀಡಿ, ನಮ್ಮ ಸರ್ಕಾರ ಬಂದರೆ ಮಹಿಳೆಯರಿಗೆ 2 ಸಾವಿರ ರೂ. ಹಾಗೂ ನಿರುದ್ಯೋಗಿಗಳಿಗೆ 3 ಸಾವಿರ ರೂ. ನೀಡುತ್ತೇವೆಂದು ಆಧಾರ್ ಕಾರ್ಡ್ ಜೆರಾಕ್ಸ್, ಫೋನ್ ನಂಬರ್ ಬರೆದುಕೊಂಡು ಜನರಿಗೆ ಆಮಿಷ ಒಡ್ಡಿ ಮಾದರಿ ನೀತಿಸಂಹಿತೆ ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿ, ಅದರ ವಿಡಿಯೋ ಹಾಗೂ ಫೋಟೋಗಳ ಸಮೇತ ಶ್ಯಾನಾಡ್ರಹಳ್ಳಿ ಗ್ರಾಮದ ರಾಜೇಂದ್ರ ಎಂಬುವರು ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಲಾಗುವುದು ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.