ಕಾಂಗ್ರೆಸ್ ಮೂರನೇ ಪಟ್ಟಿ ಪ್ರಕಟ: ಹಾಸನದಿಂದ ಬನವಾಸೆ ರಂಗಸ್ವಾಮಿ, ಅರಸೀಕೆರೆಯಿಂದ ಶಿವಲಿಂಗೇಗೌಡರಿಗೆ ಟಿಕೆಟ್

ಕಾಂಗ್ರೆಸ್ ಮೂರನೇ ಪಟ್ಟಿ ಪ್ರಕಟ: ಹಾಸನದಿಂದ ಬನವಾಸೆ ರಂಗಸ್ವಾಮಿ, ಅರಸೀಕೆರೆಯಿಂದ  ಶಿವಲಿಂಗೇಗೌಡರಿಗೆ ಟಿಕೆಟ್
Published on

ಹಾಸನ : ಕಾಂಗ್ರೆಸ್ ಪಕ್ಷದ ಮೂರನೇ ಪಟ್ಟಿ ಶನಿವಾರ ಪ್ರಕಟವಾಗಿದ್ದು, ನಿರೀಕ್ಷೆಯಂತೆ ಹಾಸನದಿಂದ ಬನವಾಸೆ ರಂಗಸ್ವಾಮಿ ಮತ್ತು ಅರಸೀಕೆರೆಯಿಂದ ಮಾಜಿ ಶಾಸಕ ಕೆ.ಎಂ. ಶಿವಲಿಂಗೇಗೌಡರಿಗೆ ಟಿಕೆಟ್ ನೀಡಲಾಗಿದೆ. ಆದರೆ ಅರಕಲಗೂಡು ಮತ್ತು ಚನ್ನರಾಯಪಟ್ಟಣ ಕ್ಷೇತ್ರ ತೀವ್ರ ಕಗ್ಗಂಟಾಗಿರುವುದರಿಂದ ಅಭ್ಯರ್ಥಿಗಳ ಕಾಂಗ್ರೆಸ್ಗೆ ತಲೆ ನೋವಾಗಿದೆ.
ಮೊದಲ ಪಟ್ಟಿಯಲ್ಲಿ ಸಕಲೇಶಪುರದ ಮುರುಳಿ ಮೋಹನ್ ಮತ್ತು ಹೊಳೆನರಸೀಪುರದಲ್ಲಿ ಶ್ರೇಯಸ್ ಪಟೇಲ್‌ಗೆ ನೀಡಲಾಯಿತು. 2ನೇ ಪಟ್ಟಿಯಲ್ಲಿ ಬೇಲೂರಿನಿಂದ ಬಿ.ಶಿವರಾಂಗೆ ಮಣೆ ಹಾಕಲಾಯಿತು. ಶನಿವಾರ ಬಿಡುಗಡೆಯಾದ 3ನೇ ಪಟ್ಟಿಯಲ್ಲಿ ಬನವಾಸೆ ರಂಗಸ್ವಾಮಿ ಮತ್ತು ಶಿವಲಿಂಗೇಗೌಡರಿಗೆ ಟಿಕೆಟ್ ನೀಡಲಾಗಿದೆ.
ಹಾಸನ ಕ್ಷೇತ್ರವನ್ನು ಕಾಂಗ್ರೆಸ್‌ನವರು ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದ್ದರು. ಒಂದು ವೇಳೆ ಭವಾನಿ ಅವರಿಗೆ ಟಿಕೆಟ್ ನೀಡಿದ್ದರೆ ಸ್ವರೂಪ್ ಅವರನ್ನು ಸೆಳೆದು ಅಭ್ಯರ್ಥಿ ಮಾಡಲು ಕಾಂಗ್ರೆಸ್ ವರಿಷ್ಠರು ಮುಂದಾಗಿದ್ದರು. ಆದರೆ ನೆನ್ನೆ ಸ್ವರೂಪ್ ಅವರಿಗೆ ಜೆಡಿಎಸ್‌ನಿಂದ ಟಿಕೆಟ್ ಘೋಷಣೆಯಾದ ಮೇಲೆ ಬನವಾಸೆ ರಂಗಸ್ವಾಮಿ ಅವರನ್ನು ಕಣಕ್ಕಿಳಿಸಿದೆ.
ಈ ಕ್ಷೇತ್ರದಿಂದ ಬಾಗೂರು ಮಂಜೇಗೌಡ ಮತ್ತು ಬನವಾಸೆ ರಂಗಸ್ವಾಮಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಇಬ್ಬರೂ ಕೂಡ ಟಿಕೆಟ್‌ಗಾಗಿ ತಮ್ಮದೇ ಮೂಲಗಳಿಂದ ಪಕ್ಷದ ವರಿಷ್ಠರಿಗೆ ಒತ್ತಡ ಹಾಕುತ್ತಿದ್ದರು. ಆದರೆ ಅಂತಿಮವಾಗಿ ಬನವಾಸೆ ರಂಗಸ್ವಾಮಿ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.
ಅದೇ ರೀತಿ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ ಮಾಜಿ ಶಾಸಕ ಶಿವಲಿಂಗೇಗೌಡರಿಗೆ ನಿರೀಕ್ಷೆಯಂತೆ ಅವರಿಗೂ ಟಿಕೆಟ್ ಘೋಷಣೆ ಮಾಡಲಾಗಿದೆ. ಆದರೆ ಇಡೀ ಜಿಲ್ಲೆಯಲ್ಲೇ ಅತಿ ಹೆಚ್ಚು ಆಕಾಂಕ್ಷಿಗಳಿರುವ ಕ್ಷೇತ್ರಗಳಾದ ಅರಕಲಗೂಡು ಮತ್ತು ಚನ್ನರಾಯಪಟ್ಟಣಕ್ಕೆ ಘೋಷಣೆ ಮಾಡದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net