

ಹಾಸನ: ಕೆಲ ಕಾಂಗ್ರೆಸ್ ನಾಯಕರು ಜಿಲ್ಲಾ ಉಸ್ತುವಾರಿ ಸಚಿವರು ಬಂದಾಗ ಮಾತ್ರ ಕಾಣಿಸಿಕೊಂಡು ಅವರು ಹೋದ ಕೂಡಲೇ ಕಾಣೆಯಾಗುತ್ತಾರೆ. ಇಂಥ ಹೊಗಳು ಭಟ್ಟ ರಾಜಕಾರಣಿಗಳನ್ನು ಹಾಗೂ ಬರೀ ವರ್ಗಾವಣೆಗೆ ಅರ್ಜಿ ಹಿಡಿದುಕೊಂಡು ಓಡಾಡುವವರನ್ನು ದೂರವಿಟ್ಟು ನಿಷ್ಠಾವಂತರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಕೆಪಿಸಿಸಿ ಮಾಜಿ ಸದಸ್ಯ ಖಡಾಖಡಿ ಪೀರ್‌ಸಾಬ್ ಮನವಿ ಮಾಡಿದರು.
ಜಿಲ್ಲೆಯಲ್ಲಿ ದಿನೇದಿನೆ ಪಕ್ಷದ ಬಲ ಕ್ಷೀಣಿಸುತ್ತಿದೆ. ಪಕ್ಷ ಸಂಘಟನೆಗೆ ಅಧ್ಯಕ್ಷರಿಗೆ ಸಹಕಾರ ಸಿಗುತ್ತಿಲ್ಲ. ಇದೇ ಕಾರಣಕ್ಕೆ ಅಸೆಂಬ್ಲಿ ಚುನಾವಣೆಯಲ್ಲಿ ಸೋಲಾಗಿದೆ. ಇದೇ ವೇಳೆ ಜಿಲ್ಲಾ ಮಂತ್ರಿಯನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ. ಬರುವ ಚುನಾವಣೆಯಲ್ಲಿ ಕೈ ಅಭ್ಯರ್ಥಿ ಸೋಲಿಸಿ ಸಚಿವರ ಸ್ಥಾನಕ್ಕೆ ಕುತ್ತು ತರಲು ಕಾಣದ ಕೈಗಳು ಕೆಲಸ ಮಾಡುತ್ತಿವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಲ್ಲಾ ಕಾರ್ಯಕರ್ತರು, ಹಿರಿಯರು, ವಿಧಾನಸಭೆ ಚುನಾವಣೆಯ ಪರಾಜಿತ ಅಭ್ಯರ್ಥಿಗಳ ಅಭಿಪ್ರಾಯ ಕ್ರೂಢೀಕರಿಸಿ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡಬೇಕು. 8 ತಿಂಗಳಿಂದಲೂ ಪಕ್ಷ ಸಂಘಟನೆ, ಕಾರ್ಯಕರ್ತರ ಅಭಿಪ್ರಾಯ ಪಡೆಯಲು ಸಚಿವರನ್ನು ತಾಲೂಕುಗಳಿಗೆ ಕರೆದುಕೊಂಡು ಹೋಗಿಲ್ಲ. ಬದಲಾಗಿ ಕೆಲವರು ವರ್ಗಾವಣೆ ದಂಧೆಯಲ್ಲಿ ತೊಡಗಿ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಪರೋಕ್ಷವಾಗಿ ಪಕ್ಷದ ಕೆಲ ಮುಖಂಡರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾಜಿ ಸಚಿವ ದಿ. ಎಚ್.ಸಿ.ಶ್ರೀಕಂಠಯ್ಯ ಅವರ ಪುತ್ರ ವಿಜಯ್ ಕುಮಾರ್ ಅವರಿಗೆ ಟಿಕೆಟ್ ನೀಡಬೇಕು. ಮಾಜಿ ಸಚಿವ ಶಿವರಾಂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಅಭ್ಯರ್ಥಿಗಳನ್ನು ವಿಶ್ವಾಸಕ್ಕೆ ಪಡೆಯದೆ ಲೋಕಸಭೆ ಚುನಾವಣೆಗೆ ಅಭ್ಯರ್ಥಿ ಘೋಷಿಸಿದರೆ ಪಕ್ಷಕ್ಕೆ ಹಾನಿಯಾಗುವುದು ಖಚಿತ. ಆದ್ದರಿಂದ ಪ್ರತಿ ತಾಲೂಕಿನಲ್ಲೂ ಕಾರ್ಯಕರ್ತರ ಅಭಿಪ್ರಾಯ ಪಡೆದು ಪಕ್ಷಕ್ಕೆ ಚೈತನ್ಯ ತುಂಬಲು ಜಿಲ್ಲಾ ಪ್ರವಾಸ ಮಾಡಿ ಕಾರ್ಯಕರ್ತರ ಅಭಿಪ್ರಾಯ ಪಡೆದು ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಬಕೆಟ್ ಹಿಡಿಯುವ ನಾಯಕರನ್ನು ನಂಬಿ ಅಭ್ಯರ್ಥಿ ಘೋಷಿಸಬೇಡಿ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಸೇವಾದಳದ ರಾಜ್ಯ ಉಸ್ತುವಾರಿ ಮರ್ಕುಲಿ ಗೋಪಾಲೇಗೌಡ, ಮುಖಂಡರಾದ ಬಿ.ಕೆ. ತುಳಸೀಧರ್, ಅಮೀನ್‌ಜಾನ್, ಶಫಿ, ಶೇಖರಪ್ಪ ಇದ್ದರು.