

ಕಲಬುರಗಿ/ಬೆಂಗಳೂರು: ಪೊಲೀಸ್ ಸಬ್ಇನ್ಸ್ಪೆಕ್ಟರ್ 545 ಹುದ್ದೆಗಳ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ಪ್ರಕರಣದ ಉರುಳು ಹಲವರಿಗೆ ಸುತ್ತಿಕೊಳ್ಳುತ್ತಿದೆ. ಸಿಐಡಿ ತನಿಖೆಯಿಂದಾಗಿ ದಿನಕ್ಕೊಂದು ಹೊಸ ಆಯಾಮ, ಹೊಸ ಮುಖಗಳು ಬಯಲಿಗೆ ಬರುತ್ತಿದ್ದು, ಮತ್ತಷ್ಟು ಮಂದಿಗೆ ಕಂಟಕವಾಗುವುದು ನಿಶ್ಚಿತವಾಗಿದೆ. ಶುಕ್ರವಾರ ಅಫಜಲಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ಪಾಟೀಲ್ನನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರೆ, ಮತ್ತೊಂದು ತಂಡ ಪರೀಕ್ಷಾರ್ಥಿಗಳಾದ ವಿಶಾಲ್ ಮತ್ತು ಶರಣಬಸಪ್ಪ ಎಂಬುವರನ್ನು ಬಂಧಿಸಿದೆ. ಇದ ರೊಂದಿಗೆ ಬಂಧಿತರ ಸಂಖ್ಯೆ 12ಕ್ಕೆ ಏರುವುದರ ಜತೆಗೆ ಅಕ್ರಮದಲ್ಲಿ ‘ಕೈ’ ಸಿಲುಕಿಕೊಂಡಂತಾಗಿದೆ. ಅಫಜಲಪುರದ ನ್ಯಾಷನಲ್ ಫಂಕ್ಷನ್ ಹಾಲ್ ಮೇಲೆ ದಾಳಿ ನಡೆಸಿದ ಸಿಐಡಿ ತಂಡ, ಮಹಾಂತೇಶ ಪಾಟೀಲ್ನನ್ನು ವಶಕ್ಕೆ ಪಡೆಯಿತು. ಅಕ್ರಮ ಎಸಗಿದವರಲ್ಲಿ ಕಿಂಗ್ಪಿನ್ ಎನ್ನಲಾದ ಸದ್ಯ ತಲೆಮರೆಸಿಕೊಂಡಿರುವ ಆರ್.ಡಿ. ಪಾಟೀಲ್ (ರುದ್ರಗೌಡ) ಸಹೋದರನೇ ಈ ಮಹಾಂತೇಶ. ಈತ ಅಭ್ಯರ್ಥಿಗಳಿಗೆ ಬ್ಲೂಟೂತ್ ಪೂರೈಕೆ ಮಾಡಿದ್ದ ಎನ್ನಲಾಗಿದೆ.
ನಾಷನಲ್ ಫಂಕ್ಷನ್ ಹಾಲ್ನಲ್ಲಿ ಪಾಟೀಲ್ ಸಹೋದರರು ಶನಿವಾರ ಸಾಮೂಹಿಕ ವಿವಾಹ ಹಮ್ಮಿಕೊಂಡಿದ್ದಾರೆ. ಇದರ ಸಿದ್ಧತೆ ಪರಿಶೀಲಿಸಲು ಬಂದಿದ್ದ ಮಹಾಂತೇಶನನ್ನು ಸಿಐಡಿ ವಶಕ್ಕೆ ಪಡೆದಿದೆ. ಅಲ್ಲಿದ್ದ ನೂರಾರು ಜನರು ಮತ್ತು ಬೆಂಬಲಿಗರು ಪ್ರತಿಭಟನೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದರು. ಹೈಡ್ರಾಮಾದ ನಡುವೆಯೂ ಪೊಲೀಸರ ಸಹಾಯದೊಂದಿಗೆ ಮಹಾಂತೇಶನನ್ನು ಸಿಐಡಿ ಅಧಿಕಾರಿಗಳು ಕಲಬುರಗಿಗೆ ಕರೆತಂದಿದ್ದಾರೆ. ಕೆಲಹೊತ್ತಿನಲ್ಲೇ ಅಫಜಲಪುರದಿಂದ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ಸಿಐಡಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಸಿಐಡಿ ಅಧಿಕಾರಿಗಳಿಗೆ ಧಮ್ಕಿ: ಮಹಾಂತೇಶ ಪಾಟೀಲ್ನನ್ನು ವಶಕ್ಕೆ ಪಡೆದಿರುವ ವಿಷಯ ಅರಿಯುತ್ತಲೇ ಅಜ್ಞಾತ ಸ್ಥಳದಲ್ಲಿರುವ ಸಹೋದರ ಆರ್.ಡಿ. ಪಾಟೀಲ್ ಸಿಐಡಿ ಅಧಿಕಾರಿಗಳಿಗೆ ಕರೆ ಮಾಡಿ ಆವಾಜ್ ಹಾಕಿದ್ದಾನೆ. ನನ್ನ ಸಹೋದರನನ್ನು ಬಂಧಿಸಿದ್ದೀರಿ ಎಂದು ಪ್ರಶ್ನಿಸಿದ್ದಲ್ಲದೆ, ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದು ಏಕವಚನದಲ್ಲಿ ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ.
ಬಂಧಿತರು ಕೋರ್ಟ್ಗೆ ಹಾಜರು: ಗುರುವಾರ ಬಂಧಿಸಿದ್ದ ಶಾಸಕರ ಅಂಗರಕ್ಷಕ ಹಯ್ಯಾಳಿ ದೇಸಾಯಿ, ಸಿಎಆರ್ ಪೇದೆ ರುದ್ರಗೌಡ ಹಾಗೂ ಶುಕ್ರವಾರ ಬಂಧಿತ ವಿಶಾಲ್ ಮತ್ತು ಶರಣಬಸಪ್ಪನನ್ನು ವಿಚಾರಣೆಗೆ ಒಳಪಡಿಸಿದ ಸಿಐಡಿ ತಂಡ, ಸಂಜೆ ನಗರದ ಜೆಎಂಎಫ್ಸಿ ಕೋರ್ಟ್ಗೆ ಹಾಜರುಪಡಿಸಿತು.
ಮಂಗಳೂರು, ಬೆಳಗಾವಿಯಲ್ಲಿ ವಿಚಾರಣೆ: ತಾತ್ಕಾಲಿಕ ಪಟ್ಟಿಯಲ್ಲಿರುವ ಅಭ್ಯರ್ಥಿಗಳ ವಿಚಾರಣೆ ಮತ್ತು ಅವರ ಓಎಂಆರ್ ಶೀಟ್, ಪ್ರವೇಶಪತ್ರ ಸಂಗ್ರಹವನ್ನು ಸಿಐಡಿ ಅಧಿಕಾರಿಗಳು ಶುಕ್ರವಾರವೂ ನಡೆಸಿದರು. ಶನಿವಾರ ಬೆಂಗಳೂರು, ಮಂಗಳೂರು, ಬೆಳಗಾವಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಅಭ್ಯರ್ಥಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಗೈರು ಆದವರಿಗೆ ಮತ್ತೆ ನೋಟಿಸ್: ಸಿಐಡಿ ವಿಚಾರಣೆಗೆ ಗೈರು ಆಗಿರುವ ಅಭ್ಯರ್ಥಿಗಳು, ತನಿಖಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ನೋಟಿಸ್ ಸ್ವೀಕರಿಸಿದ ಅಭ್ಯರ್ಥಿಗಳು, ಭಯಗೊಂಡು ತಮ್ಮ ಬಳಿ ಓಎಂಆರ್ ಶೀಟ್ನ ಕಾರ್ಬನ್ ಶೀಟ್ ಮತ್ತು ಪ್ರವೇಶ ಪ್ರತಿ ಇಲ್ಲ. ಅದಕ್ಕಾಗಿ ವಿಚಾರಣೆಗೆ ಹಾಜರಾಗಿಲ್ಲ. ನಮಗೆ ವಿನಾಯಿತಿ ನೀಡಬೇಕೆಂದು ಹಲವು ಅಭ್ಯರ್ಥಿಗಳು ಪತ್ರ ಬರೆದಿದ್ದಾರೆ. ಇದಕ್ಕೆ ಪ್ರತಿಯಾಗಿ ಸಿಐಡಿ ಅಧಿಕಾರಿಗಳು, ದಾಖಲೆ ಇಲ್ಲದಿದ್ದರೂ ವಿಚಾರಣೆಗೆ ಹಾಜರಾಗುವಂತೆ ಮತ್ತೊಂದು ನೋಟಿಸ್ ಕಳುಹಿಸಿ, ಇದಕ್ಕೂ ಗೈರು ಆದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಪಿಎಸ್ಐ ನೇಮಕ ಅಕ್ರಮಕ್ಕೆ ಸಂಬಂಧಿಸಿದಂತೆ ದಿವ್ಯಾ ಹಾಗರಗಿಯನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ತನಿಖೆ ತೀವ್ರಗೊಳಿಸಿರುವ ಸಿಐಡಿ ಶೀಘ್ರ ಬಂಧಿಸಲಿದೆ. ದಿವ್ಯಾ ಹಾಗರಗಿ ಅವರನ್ನು ಕರ್ನಾಟಕ ನರ್ಸಿಂಗ್ ಕೌನ್ಸಿಲ್ ಮತ್ತು ಸಂಸದರ ನೇತೃತ್ವದ ದಿಶಾ ಸಮಿತಿ ಸದಸ್ಯತ್ವದಿಂದ ಪದಚ್ಯುತಗೊಳಿಸಲಾಗುವುದು. | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ
ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ 4 ಸಾವಿರ ಕಾನ್ಸ್ಟೇಬಲ್ಗಳನ್ನು ನೇಮಕಾತಿ ಮಾಡಿಕೊಳ್ಳಲಾಗಿದ್ದು, ಶೀಘ್ರವೇ ಇನ್ನೂ 2 ಸಾವಿರಕ್ಕೂ ಅಧಿಕ ಕಾನ್ಸ್ಟೇಬಲ್ಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ. ಇಲಾಖೆಯಲ್ಲಿ ಸಿಬ್ಬಂದಿಯ ಅಗತ್ಯ ಹೆಚ್ಚಾಗಿದ್ದು, ಸದ್ಯದಲ್ಲೇ 2 ಸಾವಿರ ಕಾನ್ಸ್ಟೇಬಲ್ಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದರು.
ಹೈಕೋರ್ಟ್ ಆದೇಶದಂತೆ ಈಗಾಗಲೆ ಮಸೀದಿ ಹಾಗೂ ಸ್ಪೀಕರ್ ಇಡುವಂತಹ ಎಲ್ಲ ಕಡೆ ನೋಟಿಸ್ ನೀಡಲಾಗಿದೆ. ಎಲ್ಲಿಯೂ ಹೈ ಕೋರ್ಟ್ ಆದೇಶ ಉಲ್ಲಂಘನೆ ಆಗಲು ಬಿಡುವುದಿಲ್ಲ. ರಾಜ್ಯಾದ್ಯಂತ ಪೊಲೀಸರು ಈಗಾಗಲೆ ಹಲವು ಕಡೆ ನೋಟಿಸ್ ನೀಡಿದ್ದಾರೆ. ಧಾರ್ವಿುಕ ಕೇಂದ್ರಗಳು ಕಾನೂನು ಪಾಲಿಸಬೇಕು ಎಂದು ಪ್ರವೀಣ್ ಸೂದ್ ತಿಳಿಸಿದರು.
ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕತೆಯಿಂದ ನಡೆಸಲಾಗಿದೆ. ಈ ಪ್ರಕರಣದಲ್ಲಿ ಶಾಮೀಲಾದವರನ್ನು ಬಿಡುವುದಿಲ್ಲ. ಎಲ್ಲರ ಮೇಲೂ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ. ತಪ್ಪಿತಸ್ಥರಿಗೆ ಮುಂದೆಯೂ ಪಿಎಸ್ಐ ಪರೀಕ್ಷೆ ಬರೆಯಲು ಅವಕಾಶ ನೀಡುವುದಿಲ್ಲ. | ಪ್ರವೀಣ್ ಸೂದ್ ಡಿಜಿ-ಐಜಿಪಿ