ಕಾಂಗ್ರೆಸ್ ಮಡಿಲಿಗೆ ಸುರಪುರ ನಗರಸಭೆ

ydg06
Published on

ಸುರಪುರ: ತೀವ್ರ ಕುತೂಹಲ ಕೆರಳಿಸಿದ್ದ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಭಾರಿಸುವ ಮೂಲಕ ಮೂಲಕ ಕಾಂಗ್ರೆಸ್ ನಗರಸಭೆಯನ್ನು ತನ್ನ ಮಡಿಲಿಗೆ ಹಾಕಿಕೊಳ್ಳುವಲ್ಲಿ ಯಶಸ್ಸು ಕಂಡಿತು.

ಇಲ್ಲಿನ ನಗರಸಭೆ ಕಚೇರಿಯಯಲ್ಲಿ ಮಂಗಳವಾರ ೧೦ನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಜರುಗಿತು. ಅಧ್ಯಕ್ಷ ಸ್ಥಾನ ಬಿಸಿಎ (ಮಹಿಳೆ), ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ವಾರ್ಡ್ ನಂ.೧೨ ಖುರೇಶಿ ಮೊಹಲ್ಲಾದ ಕಾಂಗ್ರೆಸ್ ಪಕ್ಷದ ಸದಸ್ಯೆ ಹೀನಾ ಕೌಸರ್ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು. ಬಿಜೆಪಿ ಪಕ್ಷದ ಸದಸ್ಯರು ಯಾರು ನಾಮಪತ್ರ ಸಲ್ಲಿಸದ ಕಾರಣ ಹೀನಾ ಕೌಸರ್ ಅವಿರೋಧವಾಗಿ ಆಯ್ಕೆಯಾದರು.

ಉಪಾಧ್ಯಕ್ಷ ಸ್ಥಾನಕ್ಕೆ ವಾರ್ಡ್ ನಂ.೫ ಉಪ್ಪಾರ ಮೊಹಲ್ಲಾದ ಕಾಂಗ್ರೆಸ್ ಪಕ್ಷದ ಸದಸ್ಯ ರಾಜಾ ಪಿಡ್ಡ ನಾಯಕ (ತಾತಾ) ಮತ್ತು ವಾರ್ಡ್ ನಂ.೧೬ ಭೋವಿಗಲ್ಲಿ ಬಿಜೆಪಿ ಪಕ್ಷದ ಸದಸ್ಯ ವಿಷ್ಣು ಸೋಮಣ್ಣ ಗುತ್ತೇದಾರ್ ನಾಮಪತ್ರ ಸಲ್ಲಿಸಿದ್ದರು. ಇಬ್ಬರು ನಾಮಪತ್ರ ಸಲ್ಲಿಸಿದ್ದರಿಂದ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಜರುಗಿತು. ಬಿಜೆಪಿ ಸದಸ್ಯ ೧೨ ಮತ ಪಡೆದರೆ ಕಾಂಗ್ರೆಸ್ ಸದಸ್ಯ ರಾಜಾ ಪಿಡ್ಡನಾಯಕ (ತಾತಾ) ೧೭ ಮತ ಪಡೆಯುವ ಮೂಲಕ ೫ ಮತಗಳ ಅಂತರದಿAದ ಜಯಗಳಿಸಿ ಉಪಾಧ್ಯಕ್ಷರಾಗಿ ಆಯ್ಕೆಯಾದರು. ರಾಯಚೂರು ಲೋಕಸಭಾ ಸದಸ್ಯ ಜಿ.ಕುಮಾರನಾಯಕ, ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಚುನಾವಣೆಯಲ್ಲಿ ಭಾಗವಹಿಸಿ ಕಾಂಗ್ರೆಸ್ ಸದಸ್ಯನ ಪರ ಮತ ಚಲಾಯಿಸಿದರು.

ಚುನಾವಣಾಧಿಕಾರಿಯಾಗಿದ್ದ ಯಾದಗಿರಿ ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ ಅವರು ಸುರಪುರ ನಗರಸಭೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹೆಸರು ಘೋಷಿಸಿದರು. ತಹಸೀಲ್ದಾರ್ ಹುಸೇನಸಾಬ್ ಅಪ್ಪಾಸಾಬ್ ಸರ್ಕಾವಸ್, ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ಇದ್ದರು.

ನಗರಸಭೆ ಸದಸ್ಯರ ಸಂಖ್ಯೆ ಒಟ್ಟು ೩೧ ಇದ್ದು ಶಾಸಕ ಮತ್ತು ಸಂಸದರು ಸಹ ಸದಸ್ಯರಾಗಿರುತ್ತಾರೆ. ಇವರು ಕೂಡ ಮತ ಚಲಾಯಿಸುವ ಹಕ್ಕು ಹೊಂದಿರುತ್ತಾರೆ. ಮಂಗಳವಾರ ಜರುಗಿದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಯ ೧೬ ಸದಸ್ಯರ ಪೈಕಿ ನಾಲ್ವರು ಗೈರಾಗಿದ್ದು ೧೨ ಜನ ಸದಸ್ಯರು ಭಾಗಿಯಾಗಿದ್ದರು. ಕಾಂಗ್ರೆಸ್‌ನ ೧೫ ಸದಸ್ಯರು ಮತ್ತು ಅವರ ಬೆಂಬಲವಾಗಿ ಶಾಸಕ, ಸಂಸದರು ಸೇರಿ ಒಟ್ಟು ೧೭ ಸದಸ್ಯರು ಹಾಜರಿದ್ದರು. ಸದಸ್ಯರು ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕೈ ಎತ್ತುವ ಮೂಲಕ ಮತ ಚಲಾಯಿಸಿದರು ಎಂದು ಚುನಾವಣಾಧಿಕಾರಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net