ಕಾಂಗ್ರೆಸ್ ಮಡಿಲಿಗೆ ಔರಾದ್ ತಾಪಂ

Aurad TP
Published on

ಔರಾದ್: ಔರಾದ್ ತಾಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಚಿಕ್ಲಿ (ಜೆ) ಕ್ಷೇತ್ರದ ಕಾಂಗ್ರೆಸ್ ಸದಸ್ಯೆ ಸೋನಾಬಾಯಿ ಸೂರಾ ಆಯ್ಕೆಯಾಗಿದ್ದಾರೆ.

ಪಟ್ಟಣದ ತಾಪಂ ಸಭಾಂಗಣದಲ್ಲಿ ಸೋಮವಾರ ಜರುಗಿದ ಚುನಾವಣೆಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸೋನಾಬಾಯಿ ಸೂರಾ 8 ಸದಸ್ಯರ ಬೆಂಬಲ ಪಡೆದು ಗೆಲುವು ಸಾಧಿಸಿದರು. ಪ್ರತಿಸ್ಪರ್ಧಿ ಬಿಜೆಪಿಯ ಸಂತಪುರ ಕ್ಷೇತ್ರದ ಧೋಂಡಾಬಾಯಿ ರಘುನಾಥ 6 ಮತ ಗಳಿಸಿ ಸೋಲನುಭವಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರ ಸ್ವಕ್ಷೇತ್ರದಲ್ಲಿ ಬಿಜೆಪಿ ಮುಖಭಂಗ ಅನುಭವಿಸಿದೆ.

ಹೊಸದಾಗಿ ಕಮಲನಗರ ತಾಲೂಕು ರಚನೆಗೂ ಮುನ್ನ ಇಲ್ಲಿನ 26 ಸದಸ್ಯ ಬಲದ ತಾಪಂನಲ್ಲಿ ಕಾಂಗ್ರೆಸ್ ಆಡಳಿತವಿತ್ತು. ವಿಭಜನೆ ನಂತರ 12 ಕ್ಷೇತ್ರಗಳು ಕಮಲನಗರ ಕ್ಷೇತ್ರಕ್ಕೆ ಹೋದರೆ, 14 ಕ್ಷೇತ್ರಗಳು ಔರಾದ್ ತಾಲೂಕಿನಲ್ಲಿ ಉಳಿದವು. ಈ ಹಿಂದೆ ಅಧ್ಯಕ್ಷೆಯಾಗಿದ್ದ ಸವಿತಾ ಪಾಟೀಲ್ ಪ್ರತಿನಿಧಿಸಿದ್ದ ತೋರಣಾ ಕ್ಷೇತ್ರ ಕಮಲನಗರ ಕ್ಷೇತ್ರಕ್ಕೆ ಹೋದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು. ಬಿಜೆಪಿ, ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.

ನೂತನ ಅಧ್ಯಕ್ಷರ ಆಯ್ಕೆ ನಂತರ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದರು. ತಾಲೂಕು ಅಧ್ಯಕ್ಷ ರಾಜಕುಮಾರ ಹಲಬುರ್ಗೆ, ಪ್ರಮುಖರಾದ ಆನಂದ ಚವ್ಹಾಣ್, ರತಿಕಾಂತ ಮಜಗೆ, ಸೋಮು ಪಾಟೀಲ್, ಸುಧಾಕರ ಕೊಳ್ಳುರ್, ನೆಹರು ಪಾಟೀಲ್, ಅಂಬವ್ವಾ ಪ್ರಕಾಶ , ನಾಗಮ್ಮಾ, ಶಿವಕುಮಾರ ನಿವೃತ್ತಿ, ನರಸಾರೆಡ್ಡಿ, ಸಂತೋಷ, ದಿಗಂಬರ ಇತರರಿದ್ದರು. ಸಹಾಯಕ ಆಯುಕ್ತೆ ಗರಿಮಾ ಪನ್ವಾರ್ ಚುನಾವಣೆ ಪ್ರಕ್ರಿಯೆ ನಡೆಸಿಕೊಟ್ಟರು. ತಾಪಂ ಇಒ ಮಾಣಿಕರಾವ ಪಾಟೀಲ್ ಇದ್ದರು. ಹೊಸಬರ ಅವಧಿ ಕೇವಲ ಮೂರು ತಿಂಗಳು ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net