

ಹನೂರು: ವಿಧಾನಸಭಾ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ. ಆದ್ದರಿಂದ ಮುಂಬರುವ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದರ ಮೂಲಕ ಭದ್ರಕೋಟೆ ಎಂಬುದನ್ನು ಮತ್ತೇ ಸಾಬೀತು ಪಡಿಸಬೇಕು ಎಂದು ಶಾಸಕ ಆರ್.ನರೇಂದ್ರ ತಿಳಿಸಿದರು.
ತಾಲೂಕಿನ ಬಿ.ಎಂ ಹಳ್ಳಿ (ಗುಳ್ಯ) ಎಲ್ಲೇಮಾಳ ಮಾರ್ಗದಲ್ಲಿ ಸೋಮವಾರ 90 ಲಕ್ಷ ರೂ. ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಸಾರ್ವಜನಿಕರ ಸಮಸ್ಯೆ ಆಲಿಸಿ ಮಾತನಾಡಿದರು.
ಹನೂರು ಕಾಂಗ್ರೆಸ್‌ನ ಭದ್ರಕೋಟೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತ ಹಾಗೂ ಸರ್ಕಾರದ ಅವಧಿಯಲ್ಲಿ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳೇ ಗೆಲುವಿಗೆ ಶ್ರೀರಕ್ಷೆಯಾಗಿದೆ. ಈ ದಿಸೆಯಲ್ಲಿ ನನ್ನನ್ನು 3 ಬಾರಿ ಗೆಲ್ಲಿಸುವುದರ ಮೂಲಕ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದು, ಹಲವು ಅಭಿವೃದ್ಧಿ ಕಾರ್ಯಗಳು ನಡೆದಿದೆ. ಅದರಂತೆಯೇ ಹನೂರು ತಾಲೂಕು ರಚನೆ, ಕೆ.ಶಿಪ್ ಯೋಜನೆಯಡಿ ರಸ್ತೆ ಅಭಿವೃದ್ಧಿ ಅನುಷ್ಟಾನ, ನದಿ ಮೂಲದಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನ, ಪಿಯು ಕಾಲೇಜುಗಳ ಮಂಜೂರು, ಏಕಲವ್ಯ, ಮುರಾರ್ಜಿ ಹಾಗೂ ಇಂದಿರಾಗಾಂಧಿ ಮಾದರಿ ವಸತಿ ಶಾಲೆಗಳ ಸ್ಥಾಪನೆ, ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿ ನಿಲಯಗಳ ಸ್ಥಾಪನೆ, ಸಮುದಾಯ ಭವನಗಳ ನಿರ್ಮಾಣ, ರಸ್ತೆಗಳ ಅಭಿವೃದ್ಧಿ, ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಫಲಾನುಭವಿಗಳಿಗೆ ಸವಲತ್ತು ವಿತರಣೆ, ಗಿರಿಜನರಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಜಮೀನು ಹಕ್ಕು ಪತ್ರ ವಿತರಣೆ, ರಾಜ್ಯದಲ್ಲಿಯೇ ಮೊದಲ ಬಾರಿಗೆ ಗಿರಿಜನರಿಗೆ ಗ್ಯಾಸ್ ಸಿಲಿಂಡರ್ ವಿತರಣೆ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಕಾರ್ಯಗಳು ನಡೆದಿದ್ದು, ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇದು ಕ್ಷೇತ್ರದ ಜನರಿಗೂ ತಿಳಿಸಿದೆ. ಆದಾಗ್ಯೂ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ. ಆದ್ದರಿಂದ ಈ ಬಾರಿಯೂ ನನ್ನನ್ನು ಗೆಲ್ಲಿಸುವುದರ ಮೂಲಕ ಸೇವೆ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದರು.
90 ಲಕ್ಷ ರೂ ವೆಚ್ಚದಲ್ಲಿ ಸೇತುವೆ ನಿರ್ಮಾಣ: ಗುಳ್ಯ ಎಲ್ಲೇಮಾಳ ಸಂಪರ್ಕ ಕಲ್ಪಿಸುವ ಮಾರ್ಗಮಧ್ಯೆಯ ಹಳ್ಳದಲ್ಲಿ ಮಳೆಗಾಲದ ವೇಳೆ ಉಡುತೊರೆ ಜಲಾಶಯದಿಂದ ಎತೇಚ್ಛವಾದ ನೀರು ಹರಿಯುತ್ತಿತ್ತು. ಇದರಿಂದ ಈ ಭಾಗದ ಜನರು ಸಂಚರಿಸಲು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದರು. ಈ ದಿಸೆಯಲ್ಲಿ ದಶಕದ ಹಿಂದೆ ರಸ್ತೆ ಮಟ್ಟದ ಕಿರು ಸೇತುವೆಯನ್ನು ನಿರ್ಮಿಸಲಾಗಿತ್ತು. ಆದರೆ ಈ ಸೇತುವೆ ಕಳೆದ 2 ವರ್ಷದಿಂದ ಸಂಪೂರ್ಣ ಹಾಳಾಗಿತ್ತು. ಇದರಿಂದ ಈ ಭಾಗದ ಸಾರ್ವಜನಿಕರು ಅದರಲ್ಲೂ ಮಕ್ಕಳು, ಮಹಿಳೆಯರು ಹಾಗೂ ವಯೋವೃದ್ಧರು ತೊಂದರೆ ಅನುಭವಿಸುತ್ತಿದ್ದರಲ್ಲದೇ ವಾಹನಗಳ ಸಂಚಾರಕ್ಕೂ ತುಂಬಾ ತೊಡಕಾಗಿತ್ತು.
ಸೇತುವೆ ನಿರ್ಮಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಇದನ್ನು ಮನಗಂಡು ಕಳೆದ 3 ತಿಂಗಳ ಹಿಂದೆ ಸೇತುವೆ ನಿರ್ಮಾಣಕ್ಕೆ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿ ವಿಶೇಷ ಅನುದಾನದಡಿ 25 ಕೋಟಿ ರೂ. ಅನುದಾನ ದೊರಕಿತ್ತು. ಇದರಲ್ಲಿ ರಸ್ತೆ ಅಭಿವೃದ್ಧಿಗೆ 15 ಕೋಟಿ ರೂ, ಇನ್ನುಳಿದ 10 ಕೋಟಿ ರೂ ಅನುದಾನದಲ್ಲಿ 90 ಲಕ್ಷ ರೂ. ವೆಚ್ಚದಲ್ಲಿ ಈ ಮಾರ್ಗದಲ್ಲಿ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಅಲ್ಲದೇ ವೈಶಂಪಾಳ್ಯ ಮಾರ್ಗದ ಸೇತುವೆಗೆ 50 ಲಕ್ಷ ರೂ. ಹಾಗೂ ಇನ್ನಿತರೆ ಕಡೆಗಳಲ್ಲಿ ಸೇತುವೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಒಂದು ತಿಂಗಳೊಳಗೆ ಪೂರ್ಣಗೊಳಿಸಿ: ಜವಾಬ್ದಾರಿ ಹೊತ್ತವರು ಗುಣಮಟ್ಟವನ್ನು ಕಾಯ್ದುಕೊಳ್ಳುವುದರ ಮೂಲಕ ಕಾಮಗಾರಿಯನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು. ಈ ಬಗ್ಗೆ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಸೂಚಿಸಿದರು. ಈ ವೇಳೆ ಗ್ರಾಮಸ್ಥರು ಸೇತುವೆ ನಿರ್ಮಾಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಪಂ ಉಪಾಧ್ಯಕ್ಷ ಗಿರೀಶ್ ಸದಸ್ಯ ಹರೀಶ್‌ಕುಮಾರ್, ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮೀ, ಸದಸ್ಯರಾದ ಮಂಜುಳಾ, ಸೈಯದ್ ನಜರುಲ್ಲಾ, ಗೋವಿಂದ, ಅಕ್ಮಲ್, ಮಲ್ಲಯ್ಯ ಪಿಡಬ್ಯುಡಿ ಎಇಇ ಸದಾಶಿವಮೂರ್ತಿ ಮುಖಂಡರಾದ ಟಿ.ಮಹದೇವು, ಮೂರ್ತಿ, ರಾಜಣ್ಣ, ಸಿದ್ದರಾಜು, ಕೃಷ್ಣಪ್ಪ, ಮಾದೇಶ್, ವೆಂಕಟೇಶ್, ಗೋವಿಂದ, ಮಣಿ ಹಾಗೂ ಇನ್ನಿತರರು ಇದ್ದರು.