

ಕುಶಾಲನಗರ: ಸದಸ್ಯರ ಅಕಾಲಿಕ ಮರಣದಿಂದ ತೆರವಾಗಿದ್ದ ಸಮೀಪದ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲುರು ವಾರ್ಡ್ 1 ( ಪರಿಶಿಷ್ಟ ಪಂಗಡ ಮೀಸಲು ) ಕ್ಕೆ ಭಾನುವಾರ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ.ಆರ್.ಸುರೇಶ್ ಜಯಗಳಿಸಿದ್ದಾರೆ.
ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿಯನ್ನು ಸುರೇಶ್ 82 ಮತಗಳ ಅಂತರದಿಂದ ಮಣಿಸಿ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ.ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಎಣಿಕೆಯಲ್ಲಿ ಚುನಾವಣಾಧಿಕಾರಿ ಫಲಿತಾಂಶ ಘೋಷಿಸಿದರು.
ಗೆಲುವಿನ ರುವಾರಿಗಳಾದ ಶಾಸಕ ಡಾ.ಮಂತರ್‌ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆ.ಕೆ.ಮಂಜುನಾಥ್‌ಕುಮಾರ್, ವಲಯ ಘಟಕದ ಅಧ್ಯಕ್ಷ ಹೀರಪ್ಪ ಸೇರಿದಂತೆ ಎಲ್ಲರಿಗೂ ಅಭಿನಂದನೆ ತಿಳಸುವುದಾಗಿ ಸುರೇಶ್ ಹೇಳಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಿ.ಪಿ.ಶಶಿಧರ್, ಉಪ ಚುನಾವಣೆಯಲ್ಲಿ ಸುರೇಶ್ ಬಹುಮತದಿಂದ ಗೆಲುವು ಸಾಧಿಸಿದ್ದಾರೆ. ಜಿಲ್ಲೆ ಕಾಂಗ್ರೆಸ್ ಮಯವಾಗಲು ಈ ಗೆಲುವು ಬುನಾದಿಯಾಗಲಿದೆ. ಮುಂಬರುವ ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬೇಕಾದ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅಲ್ಲದೆ ಸಹಕಾರ ಸಂಸ್ಥೆಗಳಲ್ಲೂ ಪಕ್ಷದ ಬೆಂಬಲಿತರು ಅಧಿಕಾರ ಹಿಡಿಯುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.