

ಬೀದರ್: ನಮ್ಮ ಜತೆಯಲ್ಲಿ (ಕಾಂಗ್ರೆಸ್ ಬಿಟ್ಟು ಬಿಜೆಪಿ) ಬಂದಿದ್ದರೆ ಇಂದು ನೀವೂ ಮಂತ್ರಿ ಆಗಬಹುದಿತ್ತು. ಕೊನೆ ಗಳಿಗೆಯಲ್ಲಿ ರಾಹುಕಾಲ, ಗುಳಿಕಕಾಲ ಪೆಟ್ಟು ಕೊಟ್ಟಿದಂತೆ ಕಾಣುತ್ತದೆ. ಸ್ವಲ್ಪದರಲ್ಲಿಯೇ ಅವಕಾಶ ತಪ್ಪಿ ಹೋಯ್ತು…
ಬೀದರ್ ಕಾಂಗ್ರೆಸ್ ಶಾಸಕ ರಹೀಮ್ ಖಾನ್ ಅವರ ಬಗ್ಗೆ ಆಪರೇಷನ್ ಕಮಲ ಕುರಿತು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಬಿಚ್ಚಿಟ್ಟ ಸಂಗತಿ ಇದು. ಬುಧವಾರ ಇಲ್ಲಿನ ರಂಗಮಂದಿರದಲ್ಲಿ ಜರುಗಿದ ವಿಭಾಗ ಮಟ್ಟದ ಆರ್ಥಿಕ ಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಸಚಿವರು, ತಾವು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದಾಗಿನ ಆಪರೇಷನ್ ಕಮಲ ಪ್ರಸ್ತಾಪಿಸಿದರು.
ವೇದಿಕೆಯಲ್ಲಿದ್ದ ಶಾಸಕ ಖಾನ್ ಅವರನ್ನು ಉಲ್ಲೇಖಿಸಿ ಮಾತನಾಡಿದ ಸಚಿವರು, ಆಗ ನೀವು ಸಚಿವರಾಗಿದ್ದೀರಿ. ನಾನು ಶಾಸಕನಿದ್ದೆ. ಅಲ್ಪಸಂಖ್ಯಾತರ ಕೋಟಾದಲ್ಲಿ ನಿಮಗೆ ಸಚಿವ ಸ್ಥಾನ ಸಿಗಬೇಕೆಂಬ ಬೇಡಿಕೆಗೆ ನಾನೂ ಬೆಂಬಲಿಸಿರುವೆ. ನನ್ನ ಜತೆಗೆ ನೀವು ಮಂಗಳೂರಿಗೆ ಬಂದಿರುವಿರಿ. ಆದರೆ ಅಂತಿಮವಾಗಿ ಅದೇಕೋ ನಮ್ಮನ್ನು ಮುಂದಕ್ಕೆ ತಳ್ಳಿ ಹಿಂದೆ ಬಿದ್ದಿರುವಿರಿ. ನೀವು ಸಹ ಆಗ ನಮ್ಮೊಟ್ಟಿಗೆ ಬಂದಿದ್ದರೆ ಇಂದು ನನ್ನಂತೆ ಮಂತ್ರಿ ಆಗಬಹುದಿತ್ತು ಎಂದು ಖಾರವಾಗಿ ನುಡಿದರು. ಸಚಿವರ ಮಾತನ್ನು ಆಲಿಸಿದ ಶಾಸಕ ರಹೀಮ್ ಖಾನ್, ನಕ್ಕು ಸುಮ್ಮನಾದರು. ಸರ್ಕಾರಿ ಕಾರ್ಯಕ್ರಮದಲ್ಲಿ ಸಚಿವರ ಆಪರೇಷನ್ ಕಮಲ ವಿಷಯ ಪ್ರಸ್ತಾಪ ಗಮನ ಸೆಳೆಯಿತು.
ಕಾನೂನು ಬದಲಾವಣೆ: ಕೆಲವು ಬ್ಯಾಂಕ್ ಗಳಲ್ಲಿ ನಡೆಯುವ ವಂಚನೆ, ಅವ್ಯವಹಾರದಿಂದ ಇಡೀ ಸಹಕಾರ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ. ಇದನ್ನು ತಪ್ಪಿಸಲು ಸಹಕಾರ ಇಲಾಖೆಯ ಈಗಿನ ಕೆಲವೊಂದು ಕಾನೂನು ಬದಲಿಸಲು ಹಾಗೂ ಇನ್ನಷ್ಟು ಕಠಿಣ ಕಾಯ್ದೆಗಳನ್ನು ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವ ಸೋಮಶೇಖರ್ ಹೇಳಿದರು.