

ಬೇಲೂರು: ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಾಕತ್ತಿದ್ದಾರೆ ತಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಮೊದಲು ಘೋಷಿಸಿ, ನಂತರ ಚುನಾವಣೆಗೆ ಹೋಗಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸವಾಲು ಹಾಕಿದರು.
ಹಾಸನದಿಂದ ಚಿಕ್ಕಮಗಳೂರಿಗೆ ತೆರಳುವ ಮಾರ್ಗಮಧ್ಯೆ ಮಂಗಳವಾರ ಪಟ್ಟಣದ ನೆಹರುನಗರದಲ್ಲಿ ಜೆಡಿಎಸ್ ಕಾರ್ಯಕರ್ತರನ್ನು ಭೇಟಿ ಮಾಡಿ, ಅಭಿನಂದನೆ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಎರಡೂ ರಾಷ್ಟ್ರೀಯ ಪಕ್ಷಗಳು ಪರಸ್ಪರ ಆರೋಪ, ಪ್ರತ್ಯಾರೋಪ ಹಾಗೂ ಕಿತ್ತಾಟದಲ್ಲಿ ತೊಡಗಿದ್ದು, ಜನಸಾಮಾನ್ಯರ ಕಷ್ಟ-ಸುಖಗಳ ಬಗ್ಗೆ ಗಮನ ನೀಡುವಲ್ಲಿ ವಿಫಲವಾಗಿವೆ. ಜೆಡಿಎಸ್ 93 ಕ್ಷೇತ್ರಗಳ ಅಭ್ಯರ್ಥಿಗಳನ್ನು ಈಗಾಗಲೇ ಘೋಷಿಸಿದೆ. ಆದರೆ ಬೇರೆ ಪಕ್ಷದವರು ಇನ್ನೂ ಘೋಷಣೆ ಮಾಡಿಲ್ಲ. ಹಾಸನ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಸಭೆ ಕರೆದಿಲ್ಲ ಮತ್ತು ರದ್ದು ಸಹ ಆಗಿಲ್ಲ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ, ಎಚ್.ಡಿ.ಬಾಲಕೃಷ್ಣ, ಎಚ್.ಡಿ.ರಮೇಶ್ ಸಹೋದರರ ಮಧ್ಯೆ ಭಿನ್ನಾಭಿಪ್ರಾಯ ಬರಲು ಸಾಧ್ಯವಿಲ್ಲ, ನಾಲ್ವರೂ ಯಾವಾಗಲೂ ಒಂದೇ. ಸ್ವರೂಪ್ ಸೇರಿದಂತೆ ಪಕ್ಷದ ಎಲ್ಲ ಕಾರ್ಯಕರ್ತರಿಗೂ ಟಿಕೆಟ್ ಕೇಳುವ ಹಕ್ಕಿದೆ. ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ಪಕ್ಷ ಮತ್ತು ವರಿಷ್ಠರು ತೀರ್ಮಾನಿಸುತ್ತಾರೆ. ಈ ಬಗ್ಗೆ ಯಾವುದೇ ಗೊಂದಲವಿಲ್ಲ. ಅಲ್ಲದೆ, ಈ ಬಾರಿ ಜೆಡಿಎಸ್‌ನ ಹೆಚ್ಚಿನ ಶಾಸಕರು ವಿಧಾನಸಭೆಗೆ ಬರಲಿದ್ದು, ಅಧಿಕಾರ ಹಿಡಿಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಕೆ.ಎಸ್.ಲಿಂಗೇಶ್, ಜೆಡಿಎಸ್ ಮುಖಂಡರಾದ ಸಿ.ಎಚ್.ಮಹೇಶ್, ಖಾದರ್, ಸುಭಾನ್, ಅದ್ದೂರಿ ಕುಮಾರ್, ಭಾರತಿ ಅರುಣ್‌ಕುಮಾರ್, ಸೌಮ್ಯಾ ಆನಂದ್ ಇತರರಿದ್ದರು.