

ಚಿತ್ರದುರ್ಗ: ಗ್ಯಾರಂಟಿಗಳ ಹೆಸರಲ್ಲಿ ಜನರಿಗೆ ಟೋಪಿ ಹಾಕಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ಸಿನ ಬಣ್ಣ ಬಯಲು ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನಗರದ ಕಮ್ಮಾರೆಡ್ಡಿ ಸಮುದಾಯದ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಿಜೆಪಿ ಜಿಲ್ಲಾ ಮಟ್ಟದ ಕಾರ‌್ಯಕರ್ತರ ಸಭೆಯಲ್ಲಿ ಮಾತನಾಡಿ, ಗ್ಯಾರಂಟಿಗಳ ಹೆಸರಲ್ಲಿ ಜನರನ್ನು ಮೋಸಗೊಳಿಸಲು ಮುಂದಾಗಿರುವ ಕಾಂಗ್ರೆಸ್ ವಿರುದ್ಧ ಹೋರಾಟಕ್ಕೆ ಸಿದ್ಧನಿದ್ದೇನೆ ಎಂದರು.
ಕೇಂದ್ರದ ಐದು ಕೆ.ಜಿ.ಅಕ್ಕಿಯೊಂದಿಗೆ, 10 ಕೆಜಿ ಅಕ್ಕಿಯನ್ನೂ ಪ್ರತ್ಯೇಕವಾಗಿ ಕೊಡಬೇಕು. ಒಂದು ಕೆ.ಜಿ. ಕಡಿಮೆಯಾದರೂ ಸುಮ್ಮನೇ ಕೂರುವುದಿಲ್ಲ. ಭರವಸೆ ಈಡೇರಿಸಲಾಗದಿದ್ದರೆ ಅಧಿಕಾರದಲ್ಲಿರಲು ಯಾವುದೇ ನೈತಿಕಹಕ್ಕು ಕಾಂಗ್ರೆಸ್‌ಗೆ ಇಲ್ಲವೆಂದು ಗುಡುಗಿದ ಯಡಿಯೂರಪ್ಪ, ಜುಲೈ 4ರಿಂದ 10 ದಿನ ಮಾಜಿ ಶಾಸಕರ ಜತೆಗೂಡಿ ಬೆಂಗಳೂರಲ್ಲಿ ಧರಣಿ ನಡೆಸುವುದಾಗಿ ಘೋಷಿಸಿದರು.
ತಮ್ಮ ಅವಧಿ ಜಾರಿಗೊಳಿಸಿದ್ದ ಭಾಗ್ಯಲಕ್ಷ್ಮೀ, ಹೈನುಗಾರರಿಗೆ ಪ್ರೋತ್ಸಾಹಧನ, ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಮೊದಲಾದ ಯೋಜನೆಗಳನ್ನು ಶೇ.100 ಅನುಷ್ಠಾನಗೊಳಿಸಿದ್ದೇವೆ ಎಂದರು.
ಸೋಲಿನಿಂದ ಧೃತಿಗೆಡದೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ‌್ಯಕರ್ತರು ಸೇರಿದ್ದಕ್ಕೆ ಹರ್ಷ ವ್ಯಕ್ತಪಡಿಸಿದ ಅವರು, ಮುಂಬರುವ ತಾಪಂ, ಜಿಪಂ ಚುನಾವಣೆಗಳಲ್ಲೂ ಗೆಲುವು ಸಾಧಿಸೋಣ, ರಾಜ್ಯದ ಎಲ್ಲ 28 ಪಾರ್ಲಿಮೆಂಟ್ ಕ್ಷೇತ್ರಗಳಲ್ಲೂ ಬಿಜೆಪಿಯನ್ನು ಗೆಲ್ಲಿಸಿ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡೋಣವೆಂದು ಕಾರ‌್ಯಕರ್ತರನ್ನು ಹುರಿದುಂಬಿಸಿದರು.
ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರು ಮಾತನಾಡಿ,ಚುನಾವಣೆ ಮೊದಲು ಆಶ್ವಾಸನೆ ನೀಡಿದ ಕಾಂಗ್ರೆಸ್ ಈಗ ಜನರನ್ನು ವಂಚಿಸುತ್ತಿದೆ. ಅಂದಾಜಿಲ್ಲದೆ ಗ್ಯಾರಂಟಿಗಳನ್ನು ಘೋಷಿಸಿ ಈಗ ಕೇಂದ್ರವನ್ನೂ ದೂಷಿಸುತ್ತಿದೆ. ಗ್ಯಾರಂಟಿಗಳ ಮೋಸದ ಆಟದ ಹಿಂದೆ ರಾಹುಲ್‌ಗಾಂಧಿ,ಪ್ರಿಯಾಂಕಗಾಂಧಿ ಅವರಿದ್ದಾರೆ. ಇವರು ಎಐಸಿಸಿ ಅಧ್ಯಕ್ಷರ ಮೂಲಕ ಗ್ಯಾರಂಟಿಗಳನ್ನು ಘೋಷಿಸಿದ್ದಾರೆಂದು ಆಕ್ರೋಶ ವ್ಯಕ್ತ ಪಡಿಸಿದರು.
ಮಾಜಿ ಸಚಿವ ಬಿ.ಸಿ.ನಾಗೇಶ್ ಮಾತನಾಡಿ,ಸಿದ್ದರಾಮಯ್ಯ ಸಿಎಂ ಆಗುತ್ತಿದ್ದಂತೆ ಕೆಲ ಸ್ವಯಂಘೋಷಿತ ಶಿಕ್ಷಣ ತಜ್ಞರು,ಸಾಹಿತಿಗಳು ಪಠ್ಯ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ. ಒಂದು ಸಮುದಾಯವನ್ನು ಓಲೈಸಲು ಸಿದ್ದರಾಮಯ್ಯ ಪಠ್ಯ ಬದಲಾವಣೆಗೆ ಒಪ್ಪಿದ್ದಾರೆ. ನ ಮ್ಮ ಸಂಸ್ಕೃತಿ,ದೇಶ ಹಾಳಾದರೂ ಪರವಾಗಿಲ್ಲ ಸೋನಿಯಾಗಾಂಧಿ ಅವರನ್ನು ಮೆಚ್ಚಿಸಲು ಮೆಕಾಲೆ ಶಿಕ್ಷಣದ ಜಾರಿಗೆ ಮುಂದಾಗಿದ್ದಾರೆ. ಸೋಲು-ಗೆಲುವು ಸಹಜ,ನಮ್ಮ ಶೇ.36 ಮತ ಪ್ರಮಾಣ ಕಡಿಮೆಯಾಗಿಲ್ಲವೆಂದರು.
ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್,ಶಾಸಕ ಎಂ.ಚಂದ್ರಪ್ಪ,ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿದರು. ದಾವಣ ಗೆರೆ ಸಂಸದ ಜಿ.ಎಂ.ಸಿದ್ದೇಶ್ವರ,ಮಾಜಿ ಶಾಸಕರಾದ ತಿಪ್ಪೇಸ್ವಾಮಿ,ಪೂರ್ಣಿಮಾಶ್ರೀನಿವಾಸ್,ರೇಣುಕಾಚಾರ‌್ಯ,ಎಂಎಲ್‌ಸಿ ಕೆ.ಎಸ್.ನವೀ ನ್,ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ,ಸೌಭಾಗ್ಯಬಸವರಾಜನ್,ಸುರೇಶ್‌ಸಿದ್ದಾಪುರ,ಅನಿಲ್‌ಕುಮಾರ್,ಜಯಪಾಲಯ್ಯ,ರಾಜೇಶ್,ನರೇಂ ದ್ರ,ನಗರಸಭಾ ಸದಸ್ಯರು,ಪಕ್ಷದ ಪದಾಧಿಕಾರಿಗಳಿದ್ದರು.
ರೈತಸಂಘಟನೆಗಳು ಮೌನ ವಹಿಸಿವೆ
ಒಂದೆಡೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಒಂದು ತಿಂಗಳ ಅವಧಿ ಕಾಂಗ್ರೆಸ್ ದುರಾಡಳಿತದ ಬಗ್ಗೆ ರಾಜ್ಯದಲ್ಲಿ ಹಾಗೂ ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ ಅವರ 9 ವರ್ಷದ ಸಾಧನೆಗಳ ಕುರಿತು ದೇಶದೆಲ್ಲೆಡೆ ಚರ್ಚೆಯಾಗುತ್ತಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ಕಾಂಗ್ರೆಸ್ಸಿನ 65 ವರ್ಷದ ಸಾಧನೆ ಏನೆಂದು ಹೇಳದೆ ಮತ ಕೇಳಿದ್ದ ಸಿದ್ದರಾಮಯ್ಯ ಅವರಿಗೆ ಜನ ಒಮ್ಮೆ ಉತ್ತರ ಕೊಟ್ಟಿದ್ದಾರೆ. ಗ್ಯಾರಂಟಿಗಳನ್ನು ಘೋಷಿಸಿ ರಾಜ್ಯವನ್ನು ಪಾಕಿಸ್ತಾನ, ಶ್ರೀಲಂಕಾವನ್ನಾಗಿ ಮಾಡಲು ಕಾಂಗ್ರೆಸ್ ಹೊರಟಿದೆ. ಫಸಲ್‌ಬೀಮಾ ಯೋಜನೆಯಡೆ ರಾಜ್ಯ ಸರ್ಕಾರದ ನಿರ್ಲಕ್ಷೃ, ವಿದ್ಯುತ್ ದರ ಏರಿಕೆ ವಿರುದ್ಧ ರೈತ ಸಂಘಟನೆಗಳು ಮಾತನಾಡುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಕಾಂಗ್ರೆಸ್ ವಿರುದ್ಧ ಈಗಾಗಲೇ ಜನರು ಪ್ರತಿಭಟನೆಗೆ ಇಳಿದಿದ್ದಾರೆ ಎಂದರು.
ಸಂತೋಷ ತಂದಿದೆ
ಅಧಿಕಾರಕ್ಕೆ ಬರುವುದಾಗಿ ಕಾಂಗ್ರೆಸ್ ಕನಸಿನಲ್ಲೂ ಎಣಿಸಿರಲಿಲ್ಲ. ರಾಜ್ಯ ವಿಧಾನಸಭಾ ಚುನಾವಣೆ ಮತದಾನ ದಿನದವರೆಗೂ ಕಾಂಗ್ರೆಸ್ಸಿಗೆ ಒಳೊಳಗೆ ಕೆಲಸ ಮಾಡಿದ್ದ ನನ್ನ ಕ್ಷೇತ್ರದ ಹಲವರು ಈಗ ಇಲ್ಲಿರುವುದು ನನಗೆ ಸಂತೋಷ ತಂದಿದೆ ಎಂದು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು. ಮಧ್ಯ ಪ್ರವೇಶಿಸಿದ ಇನ್ನಿಬ್ಬರು ಶಾಸಕರು ನಮ್ಮ ಕ್ಷೇತ್ರದಲ್ಲೂ ಆಗಿದೆ ಎಂದು ದನಿಗೂಡಿಸಿದಾಗ, ನಾನು ನನ್ನ ಕ್ಷೇತ್ರದ ಬಗ್ಗೆ ಮಾತನಾಡಿದ್ದೇನೆ. ಎಲ್ಲವನ್ನೂ ಇಲ್ಲಿ ಕೊಡುವುತ್ತಿದ್ದೆ, ಆದರೆ ಯಜಮಾನರು (ಬಿಎಸ್‌ವೈ) ಇದ್ದಾರೆ, ಬೇಡ ಎಂದರು.
*ಕೋಟ್
ಯಡಿಯೂರಪ್ಪ ಸಿಎಂ ಆಗಿದ್ದಾಗ ರಾಜ್ಯದಲ್ಲಿ ವಿಚಿತ್ರ ಮಳೆಯಾಗಿತ್ತು. ಆದರೆ, ಸಿದ್ದರಾಮಯ್ಯ ಬರುತ್ತಿದ್ದಂತೆ ಮಳೆ ಕೊರತೆಯಾಗಿದೆ. ಪಕ್ಷದ ಕೆಲ ತಪ್ಪು ನಿರ್ಧಾರಗಳಿಂದಾಗಿ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿದೆ. ಯಡಿಯೂರಪ್ಪ ಅವಧಿ ಪೂರ್ಣಗೊಳಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಅಕ್ಕಿ ವಿಚಾರದಲ್ಲಿ ಕಾಂಗ್ರೆಸ್ ಕೇಂದ್ರದ ಮೇಲೆ ಗೂಬೆ ಕೂರಿಸಲು ಹೊರಟಿದೆ.
ಎಂ.ಚಂದ್ರಪ್ಪ, ಶಾಸಕ
*ಕೋಟ್
ವಿಧಾನಸಭಾ ಚುನಾವಣೆ ಬಳಿಕ ಏಳು ತಂಡಗಳಲ್ಲಿ ಪ್ರವಾಸ ನಡೆಸಲಾಗುತ್ತಿದೆ. ಸೋಲಿನಿಂದಾಗಿ ನಾವು ಓಡಿಹೋಗುವುದಿಲ್ಲ. ಕತ್ತಲು ಮುಗಿದ ಮೇಲೆ ಬೆಳಕು ಬರಬೇಕು. ಈ ಬಾರಿ ನರೇಂದ್ರ ಮೋದಿ ಹ್ಯಾಟ್ರಿಕ್ ಪ್ರಧಾನಿ ಎನಿಸಿಕೊಳ್ಳಲಿದ್ದಾರೆ.
ಎನ್.ರವಿಕುಮಾರ್, ಎಂಎಲ್‌ಸಿ