ಕಾಂಗ್ರೆಸ್ ಪಿಂಜಾರ ಸಮುದಾಯದ ಪರವಿದೆ

CTD Pinjara Samudaya&&&
Published on

ಚಿತ್ರದುರ್ಗ: ಕಾಂಗ್ರೆಸ್ ಪಿಂಜಾರ ಸಮುದಾಯದ ಪರವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು. ರಾಜ್ಯ ನದಾಫ್/ಪಿಂಜಾರ ಸಂಘ, ಜಿಲ್ಲಾ ಘಟಕ ಮುರುಘಾಮಠದ ಅನುಭವ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯಮಟ್ಟದ 33ನೇ ವರ್ಷದ ಸಂಸ್ಥಾಪನಾ ದಿನಾಚರಣೆ, ಸಾಧಕರು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ವಕೀಲರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಸಣ್ಣಪುಟ್ಟ ಸಮುದಾಯಗಳನ್ನು ಗೌರವದಿಂದ ಕಾಣುವ ಸಿಎಂ ಸಿದ್ದರಾಮಯ್ಯ ಪಿಂಜಾರರನ್ನು ಎಂದೂ ನಿರ್ಲಕ್ಷಿಸಿಲ್ಲ. ಅವರೊಟ್ಟಿಗೆ ನಿಮ್ಮ ಸಮಸ್ಯೆ, ಬೇಡಿಕೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಅವಕಾಶ ಮಾಡಿಕೊಡುತ್ತೇನೆ ಎಂದು ತಿಳಿಸಿದರು.

ಮೊದಲಿನಿಂದಲೂ ನಮ್ಮ ಕುಟುಂಬ ಪಿಂಜಾರ ಸಮಾಜದೊಂದಿಗೆ ಅನ್ಯೋನ್ಯವಾಗಿದೆ. ನಾನು ನಾಲ್ಕು ಬಾರಿ ಶಾಸಕನಾಗಲು ಈ ಸಮಾಜದ ಕೊಡುಗೆಯೂ ಇದೆ ಎಂದರು.

ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಮಾತನಾಡಿ, ಸಿಎಂ ಪಕ್ಷದ ತತ್ವ ಸಿದ್ಧಾಂತಕ್ಕೆ ಬದ್ಧರಾಗಿದ್ದಾರೆ. ಎಲ್ಲ ಜಾತಿ, ಧರ್ಮದವರ ಪರವಿದ್ದಾರೆ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ಬೇಡಿಕೆಗಳನ್ನು ಈಡೇರಿಸುತ್ತಾರೆಂಬ ನಂಬಿಕೆಯಿದೆ ಎಂದು ತಿಳಿಸಿದರು.

ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ಬೇಡಿಕೆಗಳು ಈಡೇರಲು ಮೊದಲು ಸಂಘಟಿತರಾಗಿ ಹೋರಾಟಕ್ಕೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ಸೀಬಾರ ಸಮೀಪ, ರೈಲ್ವೆ ನಿಲ್ದಾಣ ಬಳಿ ಟೆಂಟ್‌ಗಳಲ್ಲಿ ವಾಸಿಸುತ್ತಿರುವ ಅಲೆಮಾರಿಗಳ ಜೊತೆ ಪಿಂಜಾರ ಸಮಾಜದ ಕೆಲವರಿದ್ದಾರೆ. ಇಂಥ ಸಮುದಾಯಗಳನ್ನು ಮೊದಲಿನಿಂದಲೂ ಕಡೆಗಣಿಸುತ್ತ ಬಂದಿರುವುದು ನೋವಿನ ಸಂಗತಿ. ಸಣ್ಣ ಸಮುದಾಯಕ್ಕೂ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಸ್ಥಾನಮಾನ ಸಿಗುವಂತಾಗಬೇಕು ಎಂದರು.

ಸಂಘದ ರಾಜ್ಯಾಧ್ಯಕ್ಷ ಎಚ್. ಜಲೀಲ್ಸಾಬ್ ಮಾತನಾಡಿ, ರಾಜ್ಯದಲ್ಲಿ 15-20 ಲಕ್ಷ ಜನಸಂಖ್ಯೆ ಹೊಂದಿರುವ ಪಿಂಜಾರ ಸಮಾಜ ಅತ್ಯಂತ ಹಿಂದುಳಿದಿದೆ. ಬೇಡಿಕೆಗಳನ್ನು ಗಮನಕ್ಕೆ ತರಲು ಎರಡ್ಮೂರು ಬಾರಿ ಸಿಎಂ ಭೇಟಿಗೆ ಯತ್ನಿಸಿದರೂ ಅವಕಾಶ ಸಿಕ್ಕಿಲ್ಲ. ನ. 20 ರೊಳಗೆ ಮುಖ್ಯಮಂತ್ರಿ ಭೇಟಿಗೆ ಅವಕಾಶ ಕಲ್ಪಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.

ಎಂಎಲ್ಸಿ ಅಬ್ದುಲ್ ಜಬ್ಬಾರ್, ವಕ್ಫೃ್ಬೋರ್ಡ್ ಮಾಜಿ ಅಧ್ಯಕ್ಷ ಕೆ. ಅನ್ವರ್‌ಪಾಷ, ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಅಧ್ಯಕ್ಷ ಟಿಪ್ಪುಖಾಸಿಂ ಆಲಿ, ಪಿಂಜಾರ ಸಂಘದ ರಾಜ್ಯ ಸಮಿತಿ ಸದಸ್ಯ ಬಿ. ಗರೀಬ್ ಆಲಿ, ಜಿಲ್ಲಾಧ್ಯಕ್ಷ ಎಸ್. ರಷೀದ್, ಕೂಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಕೆಪಿಸಿಸಿ ಸದಸ್ಯ ಎ.ಎಂ. ಅಮೃತೇಶ್ವರಸ್ವಾಮಿ, ಶಕೀಲ್ ನವಾಜ್, ಮೌಲಾಸಾಬ್ ಬೆಂಡಿಗೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net