

ಬಾಗಲಕೋಟೆ: ಸ್ವಪಕ್ಷದ ಸದಸ್ಯರನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ವಿಫಲವಾದ ಬಿಜೆಪಿ. ಪೂರ್ವನಿಗದಿಯಂತೆ ಆಪರೇಶನ್ ಹಸ್ತವನ್ನು ಸಕ್ಸಸ್ ಮಾಡಿಕೊಂಡ ಕಾಂಗ್ರೆಸ್. ಪರಿಣಾಮ ಇಳಕಲ್ಲ ನಗರಸಭೆಯಲ್ಲಿ ಬಿಜೆಪಿಯ ಬಹುಮತದ ಕೋಟೆಯನ್ನು ಛದ್ರಮಾಡಿ ಅಽಕಾರ ಗದ್ದುಗೆಯನ್ನು ವಶಪಡಿಸಿಕೊಂಡ ಕಾಂಗ್ರೆಸ್ ಸಂಭ್ರಮಿಸಿದೆ...!!!
ತೀವ್ರ ಕುತೂಹಲ ಮೂಡಿಸಿದ್ದ ಇಳಕಲ್ಲ ನಗರಸಭೆ ಚುನಾವಣೆಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ ಪಕ್ಷ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಕ್ಷದ ಸುಧಾರಾಣಿ ಸಂಗಮ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಬಿಜೆಪಿಯಿಂದ ಕಾಂಗ್ರೆಸ್ ಗೆ ಬೆಂಬಲ ನೀಡಿದ ಕಾಳವ್ವ ಜಕ್ಕಾ ಅವರ ಪಾಲಾಗಿದೆ. ಇಬ್ಬರು ತಲಾ ೧೮ ಮತಗಳನ್ನು ಪಡೆದು ವಿಜಯದ ನಗೆ ಬೀರಿದರು. ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ವಿಜಯ ಗಿರಡ್ಡಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಸವಿತಾ ಆರಿ ಅವರಿಗೆ ತಲಾ ೧೪ ಮತಗಳು ಮಾತ್ರ ಬಿದ್ದು ಸೋಲು ಅನುಭವಿಸಿದರು.
೩೦ ಸದಸ್ಯರ ಪೈಕಿ ಬರೀ ೮ ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್ ಪಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ನೇತೃತ್ವದಲ್ಲಿ ಎಸೆದ ರಾಜಕೀಯ ಪಟ್ಟಿಗೆ ಬಿಜೆಪಿ, ಜೆಡಿಎಸ್, ಪಕ್ಷೇತರ ಅಭ್ಯರ್ಥಿಗಳು ತರಗೆಲೆಗಳಂತೆ ಉರಳಿ ಕಾಂಗ್ರೆಸ್ ಗೆ ಅಽಕಾರ ಗದ್ದುಗೆ ಪಡೆಯುವಲ್ಲಿ ಸಹಕರಿಸಿದರು.
೩೧ ಸದಸ್ಯ ಬಲದಲ್ಲಿ ಓರ್ವ ಬಿಜೆಪಿ ಸದಸ್ಯ ನಿಧನ ಹೊಂದಿದ್ದರಿಂದ ೩೦ ಸದಸ್ಯರು ಹಾಗೂ ಹುನಗುಂದ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಸಂಸದ ಪಿ.ಸಿ.ಗದ್ದಿಗೌಡರ ಮತದಾನದಲ್ಲಿ ಪಾಲ್ಗೊಂಡಿದ್ದರಿಂದ ಬಹುಮತಕ್ಕೆ ೧೭ ಸದಸ್ಯರ ಬೆಂಬಲ ಬೇಕಿತ್ತು. ಕಾಂಗ್ರೆಸ್ ನ ೮ ಸದಸ್ಯರು, ಬಿಜೆಪಿಯ ೬, ಜೆಡಿಎಸ್ ೨ ಹಾಗೂ ಓರ್ವ ಪಕ್ಷೇತರ ಮತ್ತು ಶಾಸಕರ ಮತ ಸೇರಿ ೧೮ ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್ ನ ಅಭ್ಯರ್ಥಿಗಳು ಗೆಲುವು ಸಾಽಸಿದರು.
ಸಂಸದ ಪಿ.ಸಿ.ಗದ್ದಿಗೌಡರ ಮತ ಸೇರಿ ಒಟ್ಟು ೨೦ ಮತಗಳನ್ನು ಹೊಂದಿದ್ದ ಬಿಜೆಪಿ ಅಽಕಾರ ಉಳಿಸಿಕೊಳ್ಳಲಾಗದೇ ಕಾಂಗ್ರೆಸ್ ಪಕ್ಷದ ರಣತಂತ್ರದ ಎದುರು ಶರಣಾಗಿ ಮುಖಭಂಗ ಅನುಭವಿಸಿದೆ.
ಬಹುಮತ ಇರುವ ಬಿಜೆಪಿ ಸದಸ್ಯರನ್ನು ಆಪರೇಶನ್ ಹಸ್ತದ ಮುಖಾಂತರ ತನ್ನ ಕಡೆಗೆ ಸೆಳೆದುಕೊಂಡಿದ್ದರಿಂದ ಚುನಾವಣೆ ಕುತೂಹಲ ಮೂಡಿಸಿತ್ತು. ಹೀಗಾಗಿಯೇ ನಗರಸಭೆ ಸುತ್ತಮುತ್ತ ೧೦೦ ಮೀಟರ್ ವರೆಗೆ ಕಲಂ ೧೪೪ ಜಾರಿ ಮಾಡಲಾಗಿತ್ತು. ಬ್ಯಾರಿಕೇಡ್ ಹಾಕಿ ಪೊಲೀಸ್ ಬಿಗಿಭದ್ರತೆ ಒದಗಿಸಲಾಗಿತ್ತು. ಒಬ್ಬರು ಎಎಸ್ಪಿ, ಡಿಎಸ್‌ಪಿ, ೨ ಸಿಪಿಐ, ೧೦ ಜನ ಪಿಎಸ್‌ಐ, ೧೬ ಜನ ಎಎಸ್‌ಐ, ಎರಡು ಎರಡು ಡಿಆರ್, ಎರಡು ಕೆಎಸ್‌ಆರ್ ಪಿ, ತುಕಡಿಗಳು ಹಾಗೂ ೧೦೦ ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ಇನ್ನು ಸದಸ್ಯರು ಪಕ್ಷಾಂತರ ಮಾಡಿದ್ದರಿಂದ ಯಾವುದೇ ಅಹಿತಕರ ಘಟನೆ ನಡೆಯದಿರಲಿ ಎಂದು ಮತದಾನಕ್ಕೆ ಬಂದ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಇದ್ದ ವಾಹನಗಳನ್ನು ಪೊಲೀಸ್ ಭದ್ರತೆಯಲ್ಲಿ ನಗರಸಭೆ ಪ್ರವೇಶ ದ್ವಾರದ ವರೆಗಿನ ಗೇಟ್ ವರೆಗೂ ಕರೆತಂದು ಒಳಗೆ ಕಳುಹಿಸಲಾಯಿತು.