

ಶ್ರೀರಂಗಪಟ್ಟಣ: ದೇಶದ ಐಕ್ಯತೆಗಾಗಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಪಾದಯಾತ್ರೆಯಲ್ಲಿ ತಾಲೂಕಿನ 15 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಮಾಜಿ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಹೇಳಿದರು.
ಪಟ್ಟಣದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಯೋಜಿಸಿದ್ದ ತಾಲೂಕು ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಭೆಯಲ್ಲಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಒಟ್ಟು 21 ಗ್ರಾಪಂಗಳಿವೆ. ಪ್ರತಿ ಗ್ರಾಪಂ ನಿಂದ 500 ಜನ ಆಗಮಿಸಬೇಕು. ಸ್ಥಳೀಯ ಸಂಸ್ಥೆಯ ಎಲ್ಲಾ ಹಾಲಿ, ಮಾಜಿ ಜನಪ್ರತಿನಿಧಿಗಳು, ಪಕ್ಷದ ಮುಖಂಡರು ಕಡ್ಡಾಯವಾಗಿ ಪಾದಯಾತ್ರೆಯಲ್ಲಿ ಭಾಗಿಯಾಗಬೇಕು ಎಂದು ಅವರು ಮನವಿ ಮಾಡಿದರು.
ಕಾಂಗ್ರೆಸ್ ಜಿಲ್ಲಾ ಮಾಧ್ಯಮ ವಿಭಾಗ ಸಂಚಾಲಕ ಎಂ.ಪುಟ್ಟೇಗೌಡ ಮಾತನಾಡಿ, ಬಿಜೆಪಿ ಸರ್ಕಾರ ಎಲ್ಲವನ್ನೂ ಖಾಸಗೀಕರಣ ಮಾಡುತ್ತಿದೆ. ಅದಾನಿ, ಅಂಬಾನಿಯಂತಹ ಕಾರ್ಪೋರೇಟ್ ಕುಳಗಳಿಗೆ ಅನುಕೂಲ ಮಾಡಿಕೊಡುತ್ತಿದೆ. ಹಾಗಾಗಿ ಬಿಜೆಪಿ ಸರ್ಕಾರವನ್ನು ಜನರೇ ಕಿತ್ತೊಗೆಯಬೇಕು ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಮಾತನಾಡಿ ರಾಹುಲ್ ಗಾಂಧಿ ಪಾದಯಾತ್ರೆ ದೇಶದ ಗಮನ ಗಮನ ಸೆಳೆಯುತ್ತಿದೆ. ಜಿಲ್ಲೆಯ ಶ್ರೀರಂಗಪಟ್ಟಣ, ಮೇಲುಕೋಟೆ, ನಾಗಮಂಗಲ ತಾಲೂಕು ಸೇರಿದಂತೆ ಒಟ್ಟು 69 ಕಿ.ಮೀ. ಸಂಚರಿಸಲಿದೆ. ಪಕ್ಷದ ಕಾರ್ಯಕರ್ತರು ಈ ಯಾತ್ರೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.