ಕಾಂಗ್ರೆಸ್ ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರಲಿದೆ

05 HANUR 3
Published on

ಹನೂರು: ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ನೂರಕ್ಕೆ ನೂರರಷ್ಟು ಅಧಿಕಾರಕ್ಕೆ ಬರಲಿದೆ. ಆದ್ದರಿಂದ ಹನೂರು ಕ್ಷೇತ್ರದ ಮತದಾರರು ಶಾಸಕ ಆರ್. ನರೇಂದ್ರ ಅವರಿಗೆ ಮತ ನೀಡಿ ಆಶೀರ್ವದಿಸಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

ಮೈಸೂರಿನ ನಿವಾಸಕ್ಕೆ ಶುಕ್ರವಾರ ಶಾಸಕ ಆರ್.ನರೇಂದ್ರ ತೆರಳಿದ್ದಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಉಳಿವು, ಸಂವಿಧಾನದ ರಕ್ಷಣೆ, ಭ್ರಷ್ಟಾಚಾರ ತೊಲಗುಸುವಿಕೆ ಹಾಗೂ ರಾಜ್ಯದಲ್ಲಿ ದುರಾಡಳಿತ ಕಿತ್ತೊಗೆಯಲು ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ ಎಂದರು.

ಎಲ್ಲೆಡೆ ಕಾಂಗ್ರೆಸ್ ಪರವಾದ ಗಾಳಿ ಬೀಸುತ್ತಿದೆ. ಆದ್ದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಹನೂರು ಕ್ಷೇತ್ರದ ಅಭಿವೃದ್ಧಿಗೆ ಇದುವರೆಗೂ ಶ್ರಮಿಸಿದ್ದು, ಮುಂದೆಯೂ ಶ್ರಮಿಸಲಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಕಾರ್ಯವನ್ನು ಮತ್ತೊಮ್ಮೆ ಸ್ಪರ್ಧಿಸಿರುವ ನರೇಂದ್ರ ಅವರ ಮೂಲಕ ಮಾಡಿಸುತ್ತೇನೆ. ಆದ್ದರಿಂದ ಕ್ಷೇತ್ರದ ಮತದಾರರು ನರೇಂದ್ರ ಅವರನ್ನು ಆಶೀರ್ವದಿಸಬೇಕು. ನರೇಂದ್ರ ಅವರಿಗೆ ನೀಡುವ ಒಂದೊಂದು ಮತವು ಸಿದ್ದರಾಮಯ್ಯಗೆ ಕೊಟ್ಟಂತಾಗುತ್ತದೆ. ಜೆಡಿಎಸ್‌ಗೆ ಮತ ನೀಡುವುದರಿಂದ ಬಿಜೆಪಿಗೆ ಅನುಕೂಲವಾಗುತ್ತದೆ. ಆದರೆ ಜೆಡಿಎಸ್ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಆ ಪಕ್ಷಕ್ಕೆ ಯಾವುದೇ ತತ್ವ, ಸಿದ್ಧಾಂತವಿಲ್ಲ. ಇತರ ಪಕ್ಷದ ಜತೆಗೂಡಿ ಅಧಿಕಾರ ಪಡೆಯಲು ಸಿದ್ಧರಿದ್ದಾರೆ. ನರೇಂದ್ರ ಅವರಿಗೆ ಮತ ನೀಡಿದರೆ ನನಗೆ ರಾಜಕೀಯ ಶಕ್ತಿ ಹೆಚ್ಚುತ್ತದೆ ಎಂದು ತಿಳಿಸಿದ್ದಾರೆ.

ಚುನಾವಣೆಯಲ್ಲಿ ದಾರಿ ತಪ್ಪಿಸಲಿಕ್ಕೆ ಕೆಲವರು ಅಪಪ್ರಚಾರ ಮಾಡ್ತಾರೆ. ಹಾಗಾಗಿ ಅಂತಹ ಅಪಪ್ರಚಾರಗಳಿಗೆ ಕಿವಿಗೊಡಬೇಡಿ. ನನ್ನ ಮೇಲೆ ಪ್ರೀತಿ, ವಿಶ್ವಾಸವಿದ್ದರೆ ಹನೂರು ಕ್ಷೇತ್ರದ ಮತದಾರರು ನರೇಂದ್ರ ಅವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net