

ಬೀದರ್: ಜಿಲ್ಲಾ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡಿಸುವಲ್ಲಿ ಪ್ರಮುಖ ಕಾರಣರಾಗಿದ್ದಾರೆಂಬ ಹಿನ್ನೆಲೆಯಲ್ಲಿ ಆರು ಜಿಪಂ ಸದಸ್ಯರನ್ನು ಕಾಂಗ್ರೆಸ್ ನಿಂದ ಉಚ್ಚಾಟಿಸಲಾಗಿದೆ. ಮಂಜುಳಾ ಶಿವಕುಮಾರ ಸ್ವಾಮಿ (ಔರಾದ್-ಎಸ್ ಕ್ಷೇತ್ರ), ಜೈಶ್ರೀ ಜೈಸಿಂಗ್ ರಾಠೋಡ್ (ನಿರ್ಣಾ), ಉಷಾ ರಾಜೇಂದ್ರ (ನಿಟ್ಟೂರ), ರವೀಂದ್ರರೆಡ್ಡಿ (ಖಟಕ ಚಿಂಚೋಳಿ), ಬಾಬುಸಿಂಗ್ ಹಜಾರಿ (ಕಮಲನಗರ), ರಾಜಶೇಖರ ಮೇತ್ರೆ (ಮುಡಬಿ) ಅವರನ್ನು ಉಚ್ಛಾಟನೆ ಮಾಡಲಾಗಿದೆ. ಈ ಕುರಿತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಜಿ ಷಫಿಯುಲ್ಲಾ ಆದೇಶ ಹೊರಡಿಸಿದ್ದಾರೆ. ಪಕ್ಷದ ಸಚೇತಕಾದೇಶವನ್ನು ಉಲ್ಲಂಘಿಸಿ ಪಕ್ಷದ ಆರು ಜಿಪಂ ಸದಸ್ಯರು ಬಿಜೆಪಿ ಪಕ್ಷದ ಸದಸ್ಯರೊಂದಿಗೆ ಸೇರಿಕೊಂಡು ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ, ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿ ಕೆಪಿಸಿಸಿ ಅಧ್ಯಕ್ಷರ ಆದೇಶದ ಮೇರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಆರು ಸದಸ್ಯರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.