ಕಾಂಗ್ರೆಸ್ ನಾಯಕರು ಕಬಳಿಸಿರುವ ವಕ್ಪ್ ಆಸ್ತಿ ವಶಪಡಿಸಿಕೊಳ್ಳಲಿ

BOMMAI
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:ಕಾಂಗ್ರೆಸ್​ನ ದೊಡ್ಡ ದೊಡ್ಡ ನಾಯಕರು ವಕ್ಪ್ ಆಸ್ತಿ ಕಬಳಿಸಿರುವ ಬಗ್ಗೆ ಅನ್ವರ್ ಮಾಣಿಪ್ಪಾಡಿ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಅದರಂತೆ, ಕಾಂಗ್ರೆಸ್ ನಾಯಕರು ನುಂಗಿರುವ ವಕ್ಪ್ ಆಸ್ತಿ ವಶಪಡಿಸಿಕೊಳ್ಳುವಂತೆ ನಾನು ಮುಖ್ಯಮಂತ್ರಿಯಾಗಿದ್ದಾಗ ವಕ್ಪ್ ಬೋರ್ಡ್​ಗೆ ಹೇಳಿದ್ದೆ ಎಂದು ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೋ ಸಂದರ್ಭದಲ್ಲಿ ಮಾತನಾಡಿದ ವಿಡಿಯೋ ತೋರಿಸಿ ಜನರ ದಾರಿ ತಪ್ಪಿಸುವ ಕೆಲಸವನ್ನು ಸಚಿವ ಜಮೀರ್ ಅಹ್ಮದ್ ಮಾಡುತ್ತಿದ್ದಾರೆ. ರೈತರ ಜಮೀನು ವಶಪಡಿಸಿಕೊಳ್ಳುವಂತೆ ನಾನು ವಕ್ಪ್ ಮಂಡಳಿಗೆ ಹೇಳಿದ್ದೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರಿಗೆ ಕೊಟ್ಟಿರುವ ನೋಟಿಸ್ ವಾಪಸ್ ಪಡೆಯುವಂತೆ ಹೇಳಿರುವುದು ಕಣ್ಣೊರೆಸುವ ತಂತ್ರ. ಈಗ ನೋಟಿಸ್ ವಾಪಸ್ ಪಡೆದು ಚುನಾವಣೆ ಮುಗಿದ ನಂತರ ರೈತರಿಗೆ ಮತ್ತೆ ನೋಟಿಸ್ ಕೊಡುವುದಿಲ್ಲ ಎನ್ನುವ ಗ್ಯಾರಂಟಿ ಇದೆಯೆ? ಅದರ ಬದಲು ಈ ಕುರಿತು ಆಗಿರುವ ಗೆಜೆಟ್ ಅಧಿಸೂಚನೆ ರದ್ದು ಮಾಡಬೇಕು. ಮುಖ್ಯಮಂತ್ರಿಯವರಿಗೆ ರೈತರ ಬಗ್ಗೆ ನಿಜವಾಗಲೂ ಕಾಳಜಿ ಇದ್ದಲ್ಲಿ ತಕ್ಷಣ ಗೆಜೆಟ್ ನೋಟಿಫೀಕೆಶನ್ ರದ್ದು ಮಾಡಬೇಕು. ಯಾವುದೇ ರೈತರಿಗೆ ನೋಟಿಸ್ ಕೊಡಬಾರದು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net