

ಬಾಗಲಕೋಟೆ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿರುದ್ದ ಕಾಂಗ್ರೆಸ್ ಪಕ್ಷ ನಡೆಸಿರುವ ಪೇ ಸಿಎಂ ಅಭಿಯಾನದಿಂದ ಬಿಜೆಪಿ ಕೆಂಡಾಮಂಡಲವಾಗಿದ್ದು, ಸಿಎಂ ಆದಿಯಾಗಿ ಸಚಿವರು ಕೈ ನಾಯಕರ ವಿರುದ್ದ ಮುಗಿಬಿದ್ದಿದ್ದಾರೆ.
ಬಾಗಲಕೋಟೆಗೆ ಆಗಮಿಸಿದ್ದ ಸಚಿವ ಬಿ.ಶ್ರೀರಾಮುಲು ಸಹ ಕಾಂಗ್ರೆಸ್, ಸಿದ್ದರಾಮಯ್ಯ, ಡಿಕೆಶಿ ವಿರುದ್ದ ತೀವ್ರ ಕಿಡಿಕಿಡಿಕಾರಿದ್ದಾರೆ. ಮುಂದುವರೆದು ಕಾಂಗ್ರೆಸ್ ಪಕ್ಷದವರನ್ನು ಅಲಿಬಾಬಾ ಹಾಗೂ 40 ಕಳ್ಳರಿಗೆ ಹೋಲಿಕೆ ಮಾಡಿದ ಸಚಿವ ಜರಿದಿದ್ದಾರೆ.
ಕಾಂಗ್ರೆಸ್ ಪಕ್ಷ ಯಾವ ನೈತಿಕತೆ ಇಟ್ಟುಕೊಂಡು ಪೇ ಸಿಎಂ ಅಭಿಯಾನ ಮಾಡುತ್ತಿದೆ. ಭ್ರಷ್ಟಾಚಾರದ ಆರೋಪದ ಮೇಲೆ ಬೇಲ್ ಪಡೆದು ಓಡಾಡುತ್ತಿರುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಪಕ್ಕಕ್ಕೆ ನಿಲ್ಲಿಸಿಕೊಂಡು ಭ್ರಷ್ಟಾಚಾರದ ಬಗ್ಗೆ ನಾಚಿಕೆ ಇಲ್ಲದಂತೆ ಮಾತನಾಡುತ್ತಿದ್ದಾರಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಕಿವಿಹಿಂಡಿದರು.
ಸಿದ್ದು, ಡಿಕೆಶಿ ಅವರನ್ನು ನರಿಗಳಿಗೆ ಹೋಲಿಕೆ ಮಾಡಿದ ಶ್ರೀರಾಮುಲು ಎರಡು ನರಿಗಳು ಕುರಿಗಳ ವೇಷ ಧರಿಸಿದ ಮಾತ್ರಕ್ಕೆ ಅವು ಕುರಿಗಳು ಆಗಲು ಸಾಧ್ಯವೆ…? ಅವು ಕುರಿ ಎನ್ನಲು ನಾವು(ಬಿಜೆಪಿ) ಬಿಡುತ್ತೇವಾ? ಈ ಡೊಂಗಿವಾದದ ರಾಜಕಾರಣಿಗಳು ನಮ್ಮ ಸಿಎಂಗೆ ಅಪಮಾನ ಆಗುವಂತ ಕೆಲಸ ಮಾಡುತ್ತಿದ್ದಾರೆ. ಸ್ವತಂತ್ರ ಭಾರತದಲ್ಲಿ ಹೀಗೆ ಒಬ್ಬ ಸಿಎಂ ವಿರುದ್ದ ಇಟ್ಟು ಕೆಟ್ಟರೀತಿಯಲ್ಲಿ ಅಪಪ್ರಚಾರ ಮಾಡಿರುವ ಉದಾಹರಣೆ ಇಲ್ಲ ಎಂದರು.
ವಿಧಾನ ಪರಿಷತ್ ಸದಸ್ಯರೊಬ್ಬರು ನಿಮ್ಮ ಮೇಡಂ ಸೋನಿಯಾಗಾಂಗೆ ಎಷ್ಟು ದುಡ್ಡು ಕೊಟ್ಟಿದ್ದೇವೆಂದು ಡೈರಿಯಲ್ಲಿ ಬರೆದಿದ್ದರು. ಅಧಿಕಾರಕ್ಕೆ ಬರಬೇಕೆಂದು ಮ್ಯಾಜಿಕ್ ಬಾಕ್ಸ್ ಎಂದು ಒಬ್ಬರನ್ನು ಬಳಕೆ ಮಾಡಿಕೊಂಡು ತಂತ್ರ ಉಪಯೋಗಿಸುತ್ತಿದ್ದಾರೆ. ಅವರು ಏನೇ ಮಾಡಿದರೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯದಲ್ಲಿ ಪುನಃ ಬಿಜೆಪಿ ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಮಡಿಕೇರಿಯಲ್ಲಿ ನಿಮ್ಮ ತಾಕತ್ತು ನಡೆಯಲ್ಲ :
ನನ್ನ ಕೆಣಕಬೇಡಿ, ಹಿಂದೆ ಬಳ್ಳಾರಿ ಪಾದಯಾತ್ರೆ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರ ಕಾಲೇಳೆದ ಶ್ರೀರಾಮುಲು, ಬಳ್ಳಾರಿಗೆ ಬಂದು ನೀವು ಯಶಸ್ವಿ ಆಗಿದ್ದೀರಿ ಅದನ್ನು ಒಪ್ಪುತ್ತೇವೆ. ಆದರೆ, ಮಡಿಕೇರಿಯಲ್ಲಿ ನಿಮ್ಮ ತಾಕತ್ತು ನಡೆಯಲಿಲ್ಲ. ಅಂದು ಏನೋ ಆಯಿತು. ಹಾಗೆಂದು ನಿಮ್ಮನ್ನು ಮಡಿಕೇರಿ ಜನರು ಒಪ್ಪಬೇಕಲ್ಲ ಎಂದು ತಿರುಗೇಟು ನೀಡಿದರು.
ನಾವಂತೂ ಅವರನ್ನು ಕೆಣಕುತ್ತಿಲ್ಲ. ಅವರೇ ಬೆಳಗಾದರೆ ಯಾರನ್ನಾದರೂ ಕೆಣಕುತ್ತಾರೆ. ಮನುಷ್ಯನಿಗೆ ತಾಳ್ಮೆ ಇರಬೇಕು. ಅದು ಸಿದ್ದರಾಮಯ್ಯ ಅವರಿಗೆ ಇಲ್ಲ ಎಂದರೆ ನಾವೇನು ಮಾಡುವುದು? ದುರಹಂಕಾರ ಅವರ ಭವಿಷ್ಯವನ್ನು ಹಾಳು ಮಾಡುತ್ತದೆ ಎಂದು ಎಚ್ಚರಿಸಿದರು.