ಕಾಂಗ್ರೆಸ್, ದಲಿತ ಮುಖಂಡರ ಪ್ರತಿಭಟನೆ

24 mlv 1
Published on

ಮಳವಳ್ಳಿ: ಶಾಸಕ ನರೇಂದ್ರಸ್ವಾಮಿ ವಿರುದ್ಧ ಪ್ರಾಂತ ರೈತ ಸಂಘ ಜಿಲ್ಲಾ ಕಾರ್ಯದರ್ಶಿ ಕೃಷ್ಣೇಗೌಡ ಸಲ್ಲದ ಆರೋಪ ಮಾಡುವುದರ ಜತೆಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಗುರುವಾರ ಪಟ್ಟಣ ಪೊಲೀಸ್ ಠಾಣೆ ಎದುರು ದಲಿತ ಮುಖಂಡರು ಮತ್ತು ತಾಲೂಕಿನ ತಳಗವಾದಿ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

ತಳಗವಾದಿ: ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ಕಾಂಗ್ರೆಸ್ ಮುಖಂಡರು ಪ್ರತಿಭಟಿಸಿದರು. ಎಪಿಎಂಸಿ ಮಾಜಿ ನಿರ್ದೇಶಕ ದಿಲೀಪ್‌ಕುಮಾರ್ ಮಾತನಾಡಿ, ಬುಧವಾರ ತಾಲೂಕು ಪಂಚಾಯಿತಿ ಆವರಣದಲ್ಲಿ ಪ್ರತಿಭಟನೆ ನಡೆಸುವ ವೇಳೆ ಪ್ರಾಂತ ರೈತ ಸಂಘ ಜಿಲ್ಲಾ ಕಾರ್ಯದರ್ಶಿ ಕೃಷ್ಣೇಗೌಡ ಅವರು ಬಡ ಕೂಲಿಕಾರ್ಮಿಕರನ್ನು ಮೆಚ್ಚಿಸಿಕೊಳ್ಳಲು ನಮ್ಮ ಶಾಸಕರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಏಕವಚನದಲ್ಲಿ ಮಾತನಾಡಿದ್ದಾರೆ. ಕೂಡಲೇ ಅವರು ಬಹಿರಂಗ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಕುಣಿ ದೇವರಾಜು ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷ ಬಸವರಾಜು, ಸದಸ್ಯ ಕೆ.ಎಂ.ಪ್ರಭುಸ್ವಾಮಿ, ಮಾಜಿ ಅಧ್ಯಕ್ಷ ಕೆ.ಸಿ.ಚೌಡಯ್ಯ, ಟಿಎಪಿಸಿಎಂಎಸ್ ಅಧ್ಯಕ್ಷ ದ್ಯಾಪೇಗೌಡ, ನಿರ್ದೇಶಕ ಚೌಡಯ್ಯ, ತಾಪಂ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ, ಮುಖಂಡರಾದ ಜಲ್ಲಿ ಚನ್ನಪ್ಪ, ಚನ್ನಿಗರಾಮು ಇದ್ದರು.

ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ: ಪ್ರಾಂತ ರೈತ ಸಂಘ ಜಿಲ್ಲಾ ಕಾರ್ಯದರ್ಶಿ ಕೃಷ್ಣೇಗೌಡ ವಿರುದ್ಧ ಎಸ್ಸಿ-ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಪಟ್ಟಣದ ಪೊಲೀಸ್ ಠಾಣೆ ಎದುರು ದಲಿತ ಮುಖಂಡರು ಪ್ರತಿಭಟನೆ ನಡೆಸಿದರು.

ತಾಪಂ ಮಾಜಿ ಉಪಾಧ್ಯಕ್ಷ ಸಿ.ಮಾದು ಮಾತನಾಡಿ, ಪ್ರಾಂತ ರೈತ ಸಂಘ ಜಿಲ್ಲಾ ಕಾರ್ಯದರ್ಶಿ ಕೃಷ್ಣೇಗೌಡ ಅವರು ಶಾಸಕ ನರೇಂದ್ರಸ್ವಾಮಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದರೂ ತಾಲೂಕು ಮಟ್ಟದ ಅಧಿಕಾರಿಗಳು ಯಾವುದೇ ಕ್ರಮ ವಹಿಸದಿರುವುದು ನೋವಿನ ಸಂಗತಿ. ಆತನ ವಿರುದ್ಧ ಎಸ್ಸಿ-ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ದೂರು ನೀಡಿದ್ದರೂ ಕ್ರಮ ವಹಿಸದ ಪೊಲೀಸರ ನಡೆ ಖಂಡನೀಯ ಎಂದು ದೂರಿದರು.

ಹಲಗೂರು ಸಿಪಿಐ ಶ್ರೀಧರ್ ಸ್ಥಳಕ್ಕಾಗಮಿಸಿ ಮಾತನಾಡಿ, ದೂರಿನ ಸಂಬಂಧ ಆರೋಪಿತರ ವಿರುದ್ಧ ಯಾವ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕೆಂದು ಮೇಲಧಿಕಾರಿಗಳ ಬಳಿ ಕಾನೂನು ಸಲಹೆ ಪಡೆಯಲಾಗುತ್ತಿದ್ದು, ಕೂಡಲೇ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.

ಕಾಂಗ್ರೆಸ್ ಎಸ್ಸಿ-ಎಸ್ಟಿ ರಾಜ್ಯ ಸಂಚಾಲಕ ಸಾಗ್ಯ ಕೆಂಪಣ್ಣ, ತಾಲೂಕು ಅಧ್ಯಕ್ಷ ಶಾಂತರಾಜು, ತಾಪಂ ಮಾಜಿ ಅಧ್ಯಕ್ಷ ಪ್ರಭುಲಿಂಗು, ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಸಿದ್ದರಾಜು, ಕಿರಣ್ ಶಂಕರ್, ಶಿವನಂಜಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net