ಕಾಂಗ್ರೆಸ್ ತತ್ವ, ಸಿದ್ದಾಂತದ ವಿರುದ್ಧ ಜನ ಬೇಸತ್ತಿದ್ದಾರೆ

7ark1
ಎಚ್. ಯೋಗಾರಮೇಶ್
Published on

ಅರಕಲಗೂಡು: ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆ ಬಲಪಡಿಸುವ ಉದ್ದೇಶದಿಂದ ಡಿ. 12ರಂದು ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಎಚ್. ಯೋಗಾರಮೇಶ್ ತಿಳಿಸಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಲಿದ್ದು ಈ ನಿಟ್ಟಿನಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗಿದೆ. ಪಟ್ಟಣ ಹೊರವಲಯದ ಹೊನ್ನವಳ್ಳಿ ಡಿ.ಕೆ. ಕನ್ವೆನ್ಷನ್ ಹಾಲ್‌ನಲ್ಲಿ ನಡೆಯುವ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಪಕ್ಷದ ಜಿಲ್ಲಾಧ್ಯಕ್ಷ ಎಚ್.ಕೆ. ಸುರೇಶ್, ಮೈಸೂರು ವಿಭಾಗದ ಉಸ್ತುವಾರಿ ಮೈ.ವಿ.ರವಿಶಂಕರ್ ಮತ್ತಿತರ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲದ ಕಾಂಗ್ರೆಸ್ ದೇಶದೆಲ್ಲೆಡೆ ನೆಲಕಚ್ಚುತ್ತಿದೆ. ಈ ಬಾರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ತನೆಯಿಂದ ರಾಜ್ಯದಲ್ಲೂ ಕಾಂಗ್ರೆಸ್ ದೂಳಿಪಟವಾಗಲಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಹಿಂದುಗಳಿಗೆ ರಕ್ಷಣೆ ಕೊಡಲಿಲ್ಲ. ಹಿಂದುಗಳ ಹತ್ಯೆಯಾದರೂ ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ ಶಿಕ್ಷೆ ವಿಧಿಸಲಿಲ್ಲ. ಹಿಂದು ವಿರೋಧಿ ಸಿದ್ದರಾಮಯ್ಯ ಮತ್ತವರ ಬೆಂಬಲಿಗರು ಸಚಿವ ಸಿ.ಟಿ. ರವಿ ವಿರುದ್ಧ ಅಪಪ್ರಚಾರ ನಡೆಸಿ ಟೀಕಿಸುವುದು ತರವಲ್ಲ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಒಂದು ವರ್ಗವನ್ನು ಓಲೈಸಿ ಬಹು ಸಂಖ್ಯಾತರು ಬಳಸುವ ಕೆಸರಿ ಶಾಲು ಕಿತ್ತೆಸಿಯುವ ದುರ್ವತನೆ ತೋರುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ತತ್ವ, ಸಿದ್ದಾಂತದ ವಿರುದ್ಧ ಜನತೆ ರೋಸಿಹೋಗಿದ್ದು ಇದು ಚುನಾವಣೆಯಲ್ಲಿ ಬಿಜೆಪಿ ಪಾಲಿಗೆ ವರದಾನವಾಗಲಿದೆ ಎಂದರು.
ಯಡಿಯೂರಪ್ಪ ಅವರು ಸೋಲಿಲ್ಲದ ಸರದಾರ, ಆದರೆ ಸಿದ್ದರಾಮಯ್ಯ ಅವರು ಅರಕಲಗೂಡು ಸೇರಿದಂತೆ ಹಲವು ಸುರಕ್ಷಿತ ಕ್ಷೇತ್ರಗಳನ್ನು ಹುಡುತ್ತಿದ್ದು, ಅವರು ಎಲ್ಲೆ ಸ್ಪರ್ಧಿಸಿದರೂ ಗೆಲುವು ಕನಸಿನ ಮಾತು. ಅವರು ಟೀಕೆ ಟಿಪ್ಪಣಿಗಳನ್ನು ಬಿಟ್ಟು ಗೆಲ್ಲುವ ಕ್ಷೇತ್ರ ಹುಡುಕಿಕೊಳ್ಳುವುದು ಒಳಿತು. ಕ್ಷೇತ್ರದಲ್ಲಿ ಮತದಾರರ ಮುಗ್ಧತೆ ದುರ್ಬಳಕೆ ಮಾಡಿಕೊಳ್ಳುತ್ತಿರುವ ಹಾಲಿ ಮತ್ತು ಮಾಜಿ ಶಾಸಕರು ಜನರ ವಿಶ್ವಾಸ ಕಳೆದುಕೊಂಡಿದ್ದು ಚುನಾವಣೆಗೆ ಸ್ಪರ್ಧಿಸಿದರೆ ಸೋಲುವುದು ಖಚಿತ. ಪ್ರಬುದ್ಧ ಮತದಾರರು ಬಿಜೆಪಿಗೆ ಆಶೀರ್ವದಿಸುವರು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ್, ನಗರ ಪ್ರಾಧಿಕಾರ ಅಧ್ಯಕ್ಷ ಪಿ.ಟಿ. ಕೇಶವೇಗೌಡ, ಮುಖಂಡರಾದ ರಾಮಣ್ಣ, ಚಂದು, ಲೋಕೇಶ್, ವಕೀಲ ಬಿ.ಸಿ. ರಾಜೇಶ್ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net