

ಚಿಕ್ಕಮಗಳೂರು: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗದ ಮೇಲೆ ಮತಗಳ್ಳತನದ ಆರೋಪ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಡಿಎನ್ಎ ನಲ್ಲಿಯೇ ಚುನಾವಣಾ ಅಕ್ರಮವಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಸ್ಟೀಸ್ ಜಗಮೋಹನ್ ಲಾಲ್ ಸಿನ್ಹಾ ಕಾಂಗ್ರೆಸ್ ನ ಚುನಾವಣಾ ಅಕ್ರಮದ ತೀರ್ಪು ನೀಡಿದ್ದರು. ಅಂದು ಪ್ರಧಾನ ಮಂತ್ರಿ ಆಗಿದ್ದವರು ಇಂದಿರಾ ಗಾಂಧಿ ಅವರು ಎಂದು ಕಿಡಿಕಾರಿದರು.
ಲೋಕಸಭೆ ಚುನಾವಣೆಯಲ್ಲಿ ಮತಗಳ್ಳತನ ನಡೆದಿದ್ದರೆ ಆ ಕುರಿತು ಪ್ರಮಾಣ ಪತ್ರ ಸಲ್ಲಿಸಿ ದೂರು ನೀಡಲಿ. ಅದನ್ನು ಬಿಟ್ಟು ಬೀದಿಯಲ್ಲಿ ಆರೋಪ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚುನಾವಣಾ ಆಯೋಗದ ಮೇಲೆಯೇ ಮತಗಳ್ಳತನದ ಆರೋಪ ಹೊರಿಸುವ ಮೂಲಕ ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನು ಕಾಂಗ್ರೆಸ್ ನಾಯಕರು ಮೂರ್ಖ ನಾಯಕನನ್ನು ಮೂಢರಂತೆ ಹಿಂಬಾಲಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ರಾಹುಲ್ ಗಾಂಧಿ ಅವರು ಕಾಗೆ ಬಿಳಿ ಇದೆ ಎಂದರೆ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ನಾಯಕರು ಹೌದು ಹೌದು ಎನ್ನುತ್ತಾರೆ. ಇದು ಬುದ್ಧಿವಂತರ ಲಕ್ಷಣವಲ್ಲ. ಬದಲಿಗೆ ಬುದ್ಧಿ ಒತ್ತೆ ಇಟ್ಟವರ ಲಕ್ಷಣ ಎಂದು ಟೀಕಿಸಿದರು.
ಮಿಸ್ ಗೈಡ್ ಲೀಡರ್ ಆಗಿರುವ ರಾಹುಲ್ ಗಾಂಧಿ ಇದೀಗ ದೇಶವನ್ನೇ ಮಿಸ್ ಗೈಡ್ ಮಾಡಲು ಹೊರಟಿದ್ದಾರೆ. ಹಿಂದೆ ಸೈನಿಕರ ವಿರುದ್ಧ ಮಾತನಾಡಿ ಸುಪ್ರೀಂ ಕೋರ್ಟಿನಿಂದ ಛೀಮಾರಿ ಹಾಕಿಸಿಕೊಂಡಿದ್ದರು. ಇದೀಗ ಚುನಾವಣಾ ಆಯೋಗದ ಮೇಲೆ ಆರೋಪ ಮಾಡಿ ಮತ್ತೆ ಛೀಮಾರಿ ಹಾಕಿಸಿಕೊಳ್ಳಲಿದ್ದಾರೆ ಎಂದರು.
ಚುನಾವಣಾ ಆಯೋಗದ ಮೇಲೆ ಆರೋಪ ಮಾಡುತ್ತಿರುವುದು ರಾಜಕೀಯ ದೊಂಬರಾಟಕ್ಕಾಗಿ. ಒಂದು ವೇಳೆ ಮತಚೋರಿಯೇ ಆಗುವುದಿದ್ದರೆ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ಗೆಲ್ಲುತ್ತಿರಲಿಲ್ಲ. ಪ್ರಜಾಪ್ರಭುತ್ವಕ್ಕೆ ಅಪಮಾನವಾಗುವಂತೆ ಕಾಂಗ್ರೆಸ್ ವರ್ತನೆ ಇದೆ. ಮತಗಳ್ಳತನದ ಬಗ್ಗೆ ದಾಖಲೆ ಇದ್ದರೆ ನ್ಯಾಯಾಲಯದಲ್ಲಿ ದೂರು ನೀಡಲಿ ಎಂದು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಒಂದು ಕೆಟ್ಟ ಕಾಯಿಲೆ ಅಂಟಿಕೊಂಡಿದೆ. ಚುನಾವಣೆಯಲ್ಲಿ ತಾವು ಸೋತಾಗ ಇವಿಎಂ ದೂರುತ್ತಾರೆ. ತಾವು ಗೆದ್ದಾಗ ಜನತೆ ಹಾಗೂ ಪ್ರಜಾಪ್ರಭುತ್ವದ ಗೆಲುವು ಎನ್ನುತ್ತಾರೆ. ಇವಿಎಂನಿಂದಲೇ ದೇಶದಲ್ಲಿ 2004 ರಿಂದ 2013 ರವರೆಗೆ ಕಾಂಗ್ರೆಸ್ ಅಧಿಕಾರ ನಡೆಸಿತ್ತು ಎಂಬುದನ್ನು ಕಾಂಗ್ರೆಸ್ ನಾಯಕರು ಮರೆತಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಉಪಸ್ಥಿತರಿದ್ದರು.
ಮಾನಸಿಕ ಸ್ಥಿಮಿತತೆ ಕಳೆದುಕೊಂಡ ರಾಹುಲ್
ನಿರಂತರ ಸೋಲಿನಿಂದ ಹತಾಶಗೊಂಡು ಮಾನಸಿಕ ಸ್ತಿಮಿತತೆ ಕಳೆದುಕೊಂಡಿರುವ ಲೋಕಸಭೆ ವಿರೋಧ ಪಕ್ಷದ ನಾಯಕರ ರಾಹುಲ್ ಗಾಂಧಿ ಅವರು ಇದೀಗ ಚುನಾವಣಾ ಆಯೋಗದ ಮೇಲೆ ಮತಗಳ್ಳತನದ ಆರೋಪ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ಕಾಂಗ್ರೆಸ್ ಚುಕ್ಕಾಣಿ ಹಿಡಿದ ಬಳಿಕ ನಡೆದ 94 ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಇದರ ಮಧ್ಯೆ ತೆಲಂಗಾಣ, ಕರ್ನಾಟಕ, ಹಿಮಾಚಲ ಪ್ರದೇಶ ಸೇರಿದಂತೆ ಅಲ್ಲಲ್ಲಿ ಮಾತ್ರ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಸೋಲಿನ ಹತಾಶೆಯಿಂದ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.
ಮಾನಸಿಕ ಆಸ್ಪತ್ರೆಯ ರೋಗಿಯ ರೀತಿಯ ವರ್ತನೆ ಕಾಂಗ್ರೆಸ್ ನಾಯಕರಾದ್ದಾಗಿದೆ. ತಮ್ಮ ಜವಾಬ್ದಾರಿ ಏನು ಎಂಬುದನ್ನು ಮರೆತು ತಮ್ಮ ವರ್ತನೆ ತೋರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೊದಲು ಸಿಎಂ ರಾಜಿನಾಮೆ ನೀಡಲಿ
ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗದ ಮೇಲೆ ಮಾಡಿರುವ ಮತಗಳ್ಳತನ ಆರೋಪಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆ ಕೇಳುತ್ತಿದ್ದಾರೆ. ಅದಕ್ಕೂ ಮೊದಲು ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಸಿ.ಟಿ.ರವಿ ಆಗ್ರಹಿಸಿದರು.
ಚುನಾವಣಾ ಆಯೋಗಕ್ಕೆ ಮೂಲಭೂತ ಸಂರಚನೆ ಬೂತ್ ಮಟ್ಟದಲ್ಲಿ ಇರುವುದಿಲ್ಲ. ಬೂತ್ ಮಟ್ಟದಲ್ಲಿ ಬಿಎಲ್ ಓ ಇರುತ್ತಾರೆ. ಇವರು ಶಿಕ್ಷಕರು ಅಥವಾ ಸರ್ಕಾರಿ ನೌಕರರಾಗಿರುತ್ತಾರೆ. ಇವರ ಮೇಲೆ ಇಒ ಹಾಗೂ ಎಇಒ ಇರುತ್ತಾರೆ. ಜಿಲ್ಲಾ ಮಟ್ಟದಲ್ಲಿ ಡಿಇಓ ಇರುತ್ತಾರೆ. ಚುನಾವಣಾ ಆಯೋಗಕ್ಕೆ ಕೆಳ ಮಟ್ಟದವರೆಗೆ ನೆಟ್ವರ್ಕ್ ಇರುವುದಿಲ್ಲ. ಹೀಗಿರುವಾಗ ಮತಗಳ್ಳತನ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಲೋಕಸಭೆ ಚುನಾವಣೆ ನಡೆಯುವ ವೇಳೆ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿತ್ತು. ಶಾಸಕಾಂಗಕ್ಕೆ ಕಾರ್ಯಾಂಗಕ್ಕೆ ನಿರ್ದೇಶನ ನೀಡುವ ಅಧಿಕಾರವಿದೆ. ಇದನ್ನು ನೋಡಿದರೆ ಸಿಎಂ ನಿರ್ದೇಶನದ ಮೇರೆಗೆ ಮತಗಳ್ಳತನ ಮಾಡಲು ಸಾಧ್ಯವಿದೆ. ಹೀಗಾಗಿ ಮೊದಲು ಸಿದ್ದರಾಮಯ್ಯ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಮಹದೇವಪುರದಲ್ಲಿ ಬಿಜೆಪಿಗೆ ಲೀಡ್ ಬಂದರೆ ಮತಗಳ್ಳತನ ಎನ್ನುತ್ತಾರೆ. ಅದೇ ಪುಲಿಕೇಶಿ ನಗರದಲ್ಲಿ ಕಾಂಗ್ರೆಸ್ ಗೆ ಲೀಡ್ ಬಂದರೆ ಅದು ಮತಗಳ್ಳತನವಲ್ಲವೇ ಎಂದು ಪ್ರಶ್ನಿಸಿದರು.
ಕಮ್ಯುನಲ್ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಎಸ್ ಡಿಪಿಐ
ಕಮ್ಯುನಲ್ ಹಾಗೂ ಕ್ರಿಮಿನಲ್ ರೆಕಾರ್ಡ್ ಹೊಂದಿರುವ ಎಸ್ ಡಿ ಪಿ ಐ ಧರ್ಮಸ್ಥಳದ ವಿರುದ್ಧ ಹೋರಾಟ ನಡೆಸುತ್ತಿದೆ. ಸಿಮಿಯ ಇನ್ನೊಂದು ರೂಪವೇ ಎಸ್‌ಡಿಪಿಐ ಎನ್ನುವ ಅನುಮಾನವಿದೆ. ಇದನ್ನೆಲ್ಲಾ ನೋಡಿದರೆ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರಲು ದೊಡ್ಡ ಷಡ್ಯಂತ್ರವೇ ನಡೆದಿರುವ ಸಾಧ್ಯತೆ ಇದೆ ಎಂದು ಸಿ.ಟಿ.ರವಿ ಅನುಮಾನ ವ್ಯಕ್ತಪಡಿಸಿದರು.
ಚಿಪ್ಪಲ್ಲಿ ಕಾಫಿ ಕೊಡುತ್ತಿದ್ದ ಕಾಲದಲ್ಲಿ ಸಹಪಂಕ್ತಿ ಭೋಜನ ಆರಂಭಿಸಿ ಸಮಾನತೆ ಎತ್ತಿ ಹಿಡಿದವರು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು. ಅವರಿಂದಾಗಿ ಅದೆಷ್ಟೋ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ತನಿಖೆಗೂ ಮೊದಲೇ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ದೊಡ್ಡ ಷಡ್ಯಂತ್ರವೇ ನಡೆದಿದೆ ಎಂದು ಆರೋಪಿಸಿದರು.
ತನಿಖೆ ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕವಾಗಿ ನಡೆಯಲಿ. ಕೊಲೆ, ಆತ್ಮಹತ್ಯೆ, ಅಪರಿಚಿತ ಶವ ಇದರ ಬಗ್ಗೆ ತನಿಖೆಯಾಗಲಿ. ಯಾರೇ ತಪ್ಪು ಮಾಡಿದ್ದರೂ ಅದು ತಪ್ಪೇ. ಆದರೆ ತನಿಖೆಗೂ ಮೊದಲೇ ಯಾರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬಾರದು ಎಂದು ಆಗ್ರಹಿಸಿದರು.