

ದೇವನಹಳ್ಳಿ: ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಲು ಎಲ್ಲರೂ ಪಕ್ಷ ಸಂಘಟನೆಗೆ ಒತ್ತು ನೀಡಬೇಕು ಎಂದು ಮಾಜಿ ಸಂಸದ ಸಿ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ದೇವನಹಳ್ಳಿ ಸಮೀಪದ ಸಾದಹಳ್ಳಿ ಜೆಡ್‌ಗಾರ್ಡ್‌ನ್‌ನಲ್ಲಿ ಕಾಂಗ್ರೆಸ್ ಮುಖಂಡರು ಗುರುವಾರ ಹಮ್ಮಿಕೊಂಡಿದ್ದ ಚುನಾವಣಾ ಪೂರ್ವ ಸಿದ್ಧತೆ ಹಾಗೂ ಮುಖಂಡರ ಸಭೆಯಲ್ಲಿ ಮಾತನಾಡಿದರು. ಈ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಿದರೆ ಮುಂಬರುವ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಸುಲಭವಾಗಲಿದೆ ಎಂದರು.
ಕೆಪಿಸಿಸಿ ಕಾರ್ಯದರ್ಶಿ ಎ.ಸಿ. ಶ್ರೀನಿವಾಸ್ ಮಾತನಾಡಿ, ದೇವನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ನಮ್ಮ ಪ್ರತಿ ಸ್ಪರ್ಧಿಯಲ್ಲ. ನಮಗೆ ಪ್ರತಿಸ್ಪರ್ಧಿ ಜೆಡಿಎಸ್. ಹಾಗಾಗಿ ಕ್ಷೇತ್ರದ ಶಾಸಕರ ವೈಲ್ಯ ಎತ್ತಿಹಿಡಿದು ಜನರಿಗೆ ಮನವರಿಕೆ ಮಾಡಿ, ಕಾಂಗ್ರೆಸ್‌ನತ್ತ ಜನರನ್ನು ಸೆಳೆಯಬೇಕು ಎಂದರು.
ಮಾಜಿ ಶಾಸಕ ವೆಂಕಟಸ್ವಾಮಿ ಮಾತನಾಡಿ, ಕ್ಷೇತ್ರದಲ್ಲಿನ ಎದುರಾಳಿ ಜೆಡಿಎಸ್ ಮಣಿಸಲು ಕಾರ್ಯತಂತ್ರ ರೂಪಿಸಬೇಕು. ಪ್ರತಿ ಬೂತ್‌ಮಟ್ಟದಲ್ಲಿ ಕಮಿಟಿ ರಚಿಸಿ ಕನಿಷ್ಠ 20 ಜನರಂತೆ ಸಕ್ರಿಯ ಸದಸ್ಯರನ್ನು ನೇಮಿಸಬೇಕು. ಅವರ ಮೂಲಕ ಜನರೊಡನೆ ನೇರ ಸಂಪರ್ಕ ಸಾಧಿಸಿ ಅವರ ಕಷ್ಟ ಸುಖದಲ್ಲಿ ಭಾಗಿಯಾಗಬೇಕು ಎಂದರು.
ಕೆಪಿಸಿಸಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಸಿ.ಜಗನ್ನಾಥ್ ಮಾತನಾಡಿ, ಜನಬಲವಿದ್ದರೆ ಮಾತ್ರ ಚುನಾವಣೆ ಗೆಲ್ಲಲು ಸಾಧ್ಯ. ಈ ಹಿಂದಿನ ಜಿಪಂ, ತಾಪಂ ಸದಸ್ಯರ ಅಭಿವೃದ್ಧಿ ಕೆಲಸಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು. ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಗೆಲುವು ನಮ್ಮದಾಗಲಿದೆ ಎಂದರು.
ಮಾಜಿ ಶಾಸಕ ಮುನಿನರಸಿಂಹಯ್ಯ, ಜಿಪಂ ಮಾಜಿ ಸದಸ್ಯರಾದ ಕೆ.ಸಿ. ಮಂಜುನಾಥ, ಅನಂತಕುಮಾರಿ ಚಿನ್ನಪ್ಪ, ಲಕ್ಷ್ಮೀನಾರಾಯಣಪ್ಪ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಆರ್.ನಾಗೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಮುಖಂಡರಾದ ಮಾರುತಿ, ಶ್ರೀರಾಮಯ್ಯ, ಬಿ.ಚೇತನಗೌಡ, ಆರ್.ರವಿಕುಮಾರ್ ಮುಂತಾದವರಿದ್ದರು.