

ಕೊಳ್ಳೇಗಾಲ: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ರಾಜ್ಯದ ಮುಖ್ಯ ಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯ ಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಮಾಡಿದ ಹಿನ್ನಲೆ ಕಾಂಗ್ರೆಸ್ ಕಾರ್ಯರ್ತರು ಹಾಗೂ ಅಭಿಮಾನಿಗಳು ಪಟ್ಟಣದಲ್ಲಿ ಸಂಭ್ರಮಾಚರಣೆ ನಡೆಸಿದರು.
ದೇವಾಂಗ ಪೇಟೆಯ ಪಂಚರಂಗಿ ವೃತ್ತದಲ್ಲಿ ಸಮಾವೇಶಗೊಂಡ ಪಕ್ಷದ ಕಾರ್ಯಕರ್ತರು ಹಾಗೂ ದೇವಾಂಗ ಸಮುದಾಯದವರು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಪರ ಜೈಕಾರ ಕೂಗಿದರು. ನಂತರ ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ ಸಿಹಿ ವಿತರಿಸಿದರು.
ಈ ವೇಳೆ ನಿವೃತ್ತ ಮುಖ್ಯೋಪಾಧ್ಯಾಯ ಅಣ್ಣಾದ್ರೆಯ ಮಾತನಾಡಿ, ಕರ್ನಾಟಕ್ಕೆ ಭಾಗ್ಯಗಳ ಮೇಲೆ ಭಾಗ್ಯ ನೀಡಿದ ದಕ್ಷ ಅಡಳಿತಗಾರ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ಹಾಗೂ ಡಿಸಿಎಂ ಆಗಿ ಡಿ.ಕೆ. ಶಿವಕುಮಾರ್ ತಮ್ಮ ಸಚಿವ ಸಂಪುಟದ ಸಹದ್ಯೋಗಿಗಳ ಜತೆ ಪ್ರಮಾಣ ವಚನ ಸ್ವೀಕಾರ ಮಾಡಿರುವುದು ಸಂತೋಷದ ವಿಚಾರವಾಗಿದೆ. ಈ ಹಿನ್ನಲೆ ದೇವಾಂಗ ಸಮಾಜದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಈ ದಿನವನ್ನು ಸಂಭ್ರಮಿಸುತ್ತಿದ್ದೇವೆ ಎಂದರು.
ನಗರಸಭಾ ಸದಸ್ಯ ಎ.ಪಿ.ಶಂಕರ್ ಮಾತನಾಡಿ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ಅವರ ಜೋಡೆತ್ತು ಸರ್ಕಾರ ಅಧಿಕಾರಕ್ಕೆ ಬಂದಿದೆ. ಪ್ರಣಾಳಿಕೆಯಲ್ಲಿ ನೀಡಿದ 5 ಗ್ಯಾರೇಂಟಿ ಅಂಶಗಳನ್ನು ಅನುಷ್ಠಾನಗೊಳಿಸಿ ಸರ್ವ ಜನಾಂಗದ ಅಭಿವೃದ್ಧಿಗೆ ಕಾಂಗ್ರೆಸ್ ಶ್ರಮಿಸಲಿ. ಐದು ವರ್ಷ ಸುಭಧ್ರ ಆಡಳಿತ ನೀಡಿ ಬಡವರಿಗೆ, ಅಸಹಾಯಕರಿಗೆ ಅನುಕೂಲ ಮಾಡಲಿ ಎಂದು ಆಶಿಸಿದರು.
ಅಂತೆಯೇ, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದ ಎ.ಆರ್. ಕೃಷ್ಣಮೂರ್ತಿ, ಸಿ.ಪುಟ್ಟರಂಗಶೆಟ್ಟಿ, ಗಣೇಶ್ ಪ್ರಸಾದ್ ಅವರಿಗೆ ಶುಭಾಶಯವನ್ನು ಕೋರಿದರು.
ನಗರಸಭಾ ಸದಸ್ಯ ಮನೋಹರ್, ಜಿ.ಪಿ.ಶಿವಕುಮಾರ್, ರಾಘವೇಂದ್ರ, ಒಬಿಸಿ ರಾಜ್ಯ ಕಾರ್ಯದರ್ಶಿ ಎ.ಸಿ.ಗೋವಿಂದರಾಜ್, ಮುಖಂಡ ನರಸಿಂಹನ್, ಕೆ.ಆರ್.ಕೆ. ವೇಣುಗೋಪಾಲ್, ಅಚ್ಗಾಳ್ ನಾಗರಾಜಯ್ಯ, ಸುಂದರಯ್ಯ, ನಾರಾಯಣ್, ರಘು ಸ್ಟೀಮರ್, ಲಕ್ಷ್ಮೀಕಾಂತ್, ರಾಜೇಶ್ ಮತ್ತಿತರಿದ್ದರು.