ಕಾಂಗ್ರೆಸ್ ಕಾರ್ಯಕರ್ತರಿಂದ ವಿನೂತನ ಪ್ರತಿಭಟನೆ

h18-Congress 2
Published on

ಹುಬ್ಬಳ್ಳಿ: ನಗರದ ರಸ್ತೆಗಳ ಮಧ್ಯೆ ಬಿದ್ದಿರುವ ತಗ್ಗುಗಳ ದುರಸ್ತಿಗೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ವಿನೂತನ ಪ್ರತಿಭಟನೆ ನಡೆಸಿದರು. ರವಿನಗರದ ರಸ್ತೆಯಲ್ಲಿ ಬಿದ್ದಿರುವ ತಗ್ಗುಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರ ಭಾವಚಿತ್ರ ಇಟ್ಟಿರುವ ಕಾಗದದ ದೋಣಿಗಳನ್ನು ಪ್ರತಿಭಟನಾಕಾರರು ತೇಲಿಬಿಟ್ಟರು. ಪ್ರಧಾನಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಕಟೌಟ್​ಗಳಿಗೆ ಹೂವಿನ ಮಾಲೆ ಹಾಕಿ ಸನ್ಮಾನಿಸಿದ ಪ್ರತಿಭಟನಾಕಾರರು, ರಸ್ತೆಗಳನ್ನು ದುರಸ್ತಿಗೊಳಿಸುವಂತೆ ಒತ್ತಾಯಿಸಿದರು.

ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಮಹಾಪೌರ ವೆಂಕಟೇಶ ಮೇಸ್ತ್ರಿ, ಮಾಲತೇಶ ಕುಲಕರ್ಣಿ, ಮಲ್ಲಿಕಾರ್ಜುನ ಯಾತಗೇರಿ, ಸುನೀಲ ಮಠಪತಿ, ಮಣಿಕಂಠ ಗುಡಿಹಾಳ, ಲಕ್ಷ್ಮಣ ಗಡ್ಡಿ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net