

ನುಗ್ಗೇಹಳ್ಳಿ: ಹೋಬಳಿಯ ಕಲ್ಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಕಚೇರಿ ಎದುರು ಧರಣಿ ನಡೆಸಿದರು.
ಧರಣಿ ಮುಖಂಡತ್ವ ವಹಿಸಿದ್ದ ವಕೀಲ ಬಸವರಾಜ್ ಮಾತನಾಡಿ, ದೇವಿಗೆರೆ ಗ್ರಾಮದ ಕಾಳಯ್ಯ ಎಂಬುವರ ಪತ್ನಿ ರಾಜಮ್ಮ ಸಹಕಾರ ಸಂಘದಿಂದ 50 ಸಾವಿರ ರೂ. ಸಾಲ ಪಡೆದಿದ್ದು, ಅದು ಪಾಸ್‌ಬುಕ್‌ನಲ್ಲಿ ದಾಖಲಾಗಿದೆ. ಕಚೇರಿಯಲ್ಲಿ ನೋಡಿದರೆ 1 ಲಕ್ಷ ರೂ. ಅಕೌಂಟಿಗೆ ಜಮಾ ಆಗಿದೆ, ನೀವೇ ಕಟ್ಟಬೇಕು ಎಂದು ಕಾರ್ಯನಿರ್ವಹಣಾಧಿಕಾರಿ ಹೇಳುತ್ತಾರೆ. ಇಂತಹ ಪ್ರಕರಣಗಳು ಈ ವ್ಯಾಪ್ತಿಯ ರೈತರ ಹೆಸರಿನಲ್ಲಿ ನಡೆದಿವೆ. ಸಾಲದ ಮರು ಪಾವತಿ ಸಂದರ್ಭದಲ್ಲಿ 25 ಲಕ್ಷ ರೂ.ಗೂ ಹೆಚ್ಚು ಹಣ ಇಲ್ಲಿ ವ್ಯತ್ಯಾಸವಾಗುತ್ತಿದೆ. ಈ ಹಿಂದೆ ರೈತರಿಗೆ ಸೇರಿದ ಎರಡು ಲೋಡ್ ಗೊಬ್ಬರ ಬೇರೆ ಕಡೆ ಮಾರಾಟವಾಗಿದ್ದ ಕೇಸು ಇದೆ ಎಂದು ಆರೋಪಿಸಿದ ಅವರು, ಈ ಸಂಬಂಧ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ಮೋಹನ್, ಕಾಂಗ್ರೆಸ್ ಸೇವಾ ದಳದ ಅಧ್ಯಕ್ಷ ಬಡಕನಹಳ್ಳಿ ಮಂಜೇಗೌಡ, ಕಾಂಗ್ರೆಸ್ ಮುಖಂಡರಾದ ರಾಮಕೃಷ್ಣೇಗೌಡ, ಧಮ್ಮಲಿಂಗೆಗೌಡ, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷೆ ರತ್ನಮ್ಮ, ಸಾತೇನಹಳ್ಳಿ ಸಿ. ಬಾಲಕೃಷ್ಣ, ಗೊಲ್ಲರ ಹೊಸಳ್ಳಿ ಹರೀಶ್, ಪ್ರಸನ್ನಕುಮಾರ್, ಇತರರು ಹಾಜರಿದ್ದರು.