

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಪೊಲೀಸ್ ಇಲಾಖೆ ಕಾಂಗ್ರೆಸ್ ಸರ್ಕಾರದ ಕಪಿಮುಷ್ಟಿಯಲ್ಲಿದೆ. ಮುಂದೆ ಬಿಜೆಪಿ ಸರ್ಕಾರ ಬರುತ್ತದೆ, ಆಗ ಏನು ಅಂತ ಗೊತ್ತಾಗುತ್ತದೆ ಎಂದು ವಿಧಾನಸಭೆ ಪ್ರತಿ ಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಮಾತನಾಡಿದ ಅವರು, ನಾಗಮಂಗಲ ಗಲಭೆ ಪ್ರಕರಣ ಕುರಿತು ಒಂದು ಟ್ವೀಟ್ ಮಾಡಿದ್ದೆ. ಅದನ್ನೇ ದ್ವೇಷವಾಗಿ ತಗೆದುಕೊಂಡು ನನ್ನ ಮೇಲೆ ಹಾಗೂ ಸಚಿವೆ ಶೋಭಾ ಕರಂದ್ಲಾಜೆ ಮೇಲೆ ಎ್ಐಆರ್ ಮಾಡಿದ್ದಾರೆ. ಇದು ದ್ವೇಷದ ರಾಜಕೀಯ ಎಂದು ಕಿಡಿಕಾರಿದರು.
ಕೇರಳದಿಂದ ಬಂದು ವಿಧಾನಸೌಧದಲ್ಲಿ ದೇಶ ವಿರೋಧಿ ೋಷಣೆ ಕೂಗಿದ್ದರು. ಅದೇ ರೀತಿ ನಾಗಮಂಗಲದಲ್ಲಿಯೂ ಘೋಷಣೆ ಕೂಗಿದ್ದಾರೆ. ವಿಧಾನಸೌಧದಲ್ಲಿ ಕೂಗಿರುವುದನ್ನು ಆ ರೀತಿ ಕೂಗೇ ಇಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದರು. ಹಾಗಾದರೆ ನಿಮ್ಮ ಮೇಲೆ ಏಕೆ ಕೇಸ್ ಹಾಕಿಲ್ಲ. ಈಗ ನಮ್ಮ ಮೇಲೆ ಸುಮೋಟೋ ಹಾಕಿಕೊಂಡಿದ್ದಾರೆ. ಸಾರ್ವಜನಿಕರು ಯಾರೂ ದೂರು ಕೊಟ್ಟಿಲ್ಲ. ಪೊಲೀಸರೇ ದೂರು ಹಾಕಿಕೊಂಡಿದ್ದಾರೆ. ಪೊಲೀಸ್ ಇಲಾಖೆ ಕಾಂಗ್ರೆಸ್ ಸರ್ಕಾರದ ಕಪಿಮುಷ್ಟಿಯಲ್ಲಿ ಸಿಲುಕಿಕೊಂಡಿದೆ. ಪ್ರತಿ ಪಕ್ಷವನ್ನು ಬಗ್ಗು ಬಡಿಯಬೇಕು ಎಂದು ಕೇಸ್ ಹಾಕಿದ್ದಾರೆ ಎಂದರು.
ಡಾ.ಸುಧಾಕರ್ ಹಗಲು ರಾತ್ರಿ ದುಡಿದಿದ್ದಾರೆ ಕರೊನಾ ಸಮಯದಲ್ಲಿ ಸಚಿವರಾಗಿದ್ದ ಡಾ.ಕೆ.ಸುಧಾಕರ್ ಮನೆ ಬಿಟ್ಟು ಹಗಲು ರಾತ್ರಿ ಕೆಲಸ ಮಾಡಿದರು. ಆಗ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಎಲ್ಲರೂ ಮನೆಯಲ್ಲಿ ಇದ್ದರು. ಪ್ರಾಣ ಭಯದಿಂದ ಮನೆಯಿಂದ ಹೊರ ಬಂದಿರಲಿಲ್ಲ ಎಂದು ಡಿಕೆಶಿ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ಆರ್.ಅಶೋಕ್ ಗುಡುಗಿದರು.
ಅಘೋಷಿತ ತುರ್ತು ಪರಿಸ್ಥಿತಿ: ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಆಗಿದೆ. 1975-1977ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ತಂದು ದೇಶವನ್ನು ಹಾಳು ಮಾಡಿದರು. ನಮ್ಮ ಮೇಲೆ ಅಲ್ಲ, ರಾಜ್ಯಪಾಲರ ಮೇಲೂ ಕಾಂಗ್ರೆಸ್‌ನವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ರಾಜ್ಯಪಾಲರು, ವಿರೋಧ ಪಕ್ಷದ ನಾಯಕರು, ಕೇಂದ್ರ ಸಚಿವರ ಮೇಲೂ ಗೌರವವಿಲ್ಲ ಎಂದು ಆರ್.ಅಶೋಕ್ ಕಿಡಿಕಾರಿದರು.
ಕಾಂಗ್ರೆಸ್ ದ್ವಂದ್ವ ನೀತಿ ಸ್ಪಷ್ಟ: ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಆರ್.ಅಶೋಕ್, ಸಿದ್ದರಾಮಯ್ಯ ಕ್ಲೀನ್‌ಚಿಟ್ ಅಂತ ನೀವು ತೋರಿಸುತ್ತೀರಾ. 2014ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ 65 ಕೇಸ್ ಇದ್ದವು. ಆದರೂ ಕ್ಲೀನ್ ಚಿಟ್ ಎಂದು ಹೇಳಿದರು. ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ರಿಸರ್ವೇಶನ್ ಬದಲಾವಣೆ ಮಾಡಬೇಕು ಎಂದರಲ್ಲ. ಈ ಬಗ್ಗೆ ನಿಮ್ಮ ರಿಯಾಕ್ಷನ್ ಏನು? ಈ ಹಿಂದೆ ಮೀಸಲಾತಿ ವಿಚಾರಕ್ಕೆ ದೇಶವ್ಯಾಪಿ ಹೋರಾಟ ಮಾಡಿದ್ದೀರಲ್ಲ. ಈಗ ಏಕೆ ಹೋರಾಟವಿಲ್ಲ, ಸುಮ್ಮನೆ ಏಕೆ ಕುಳಿತಿದ್ದೀರಿ? ಇದರಿಂದ ಕಾಂಗ್ರೆಸ್‌ನ ದಂದ್ವ ನೀತಿ ಬಯಲಾಗಿದೆ ಎಂದರು.
ಒಂದು ದೇಶ ಒಂದು ಚುನಾವಣೆಯಿಂದ ಅನುಕೂಲ: ನೆಹರು ಕಾಲದಲ್ಲಿ ಒಟ್ಟಿಗೆ ಚುನಾವಣೆ ಮಾಡುತ್ತಿದ್ದರು. ಹಾಗಾದರೆ ನೆಹರು ಸರಿ ಇರಲಿಲ್ಲವೇ?. ಅವರು ಮಾಡಿದ್ದು ಸರಿ ಇಲ್ಲ ಎಂದು ಸಿದ್ದರಾಮಯ್ಯ ಹೇಳಲಿ. ಅವರು ಸರಿ ಇಲ್ಲ, ನಾನೇ ಸತ್ಯ ಹರಿಶ್ಚಂದ್ರ ಎಂದು ಹೇಳಲಿ. ಒಂದೇ ಚುನಾವಣೆಯಿಂದ ಜನರ ತೆರಿಗೆ ಹಣ ಉಳಿಯುತ್ತದೆ ಎಂದು ಆರ್.ಅಶೋಕ್ ವಾಗ್ದಾಳಿ ನಡೆಸಿದರು.
’ಕೈ’ ಬಿಟ್ಟಿದ್ದಕ್ಕೆ ಈಗ ಮುನಿರತ್ನ ಮೇಲೆ ಸೇಡು: ಶಾಸಕ ಮುನಿರತ್ನ ನಮ್ಮ ಪಾರ್ಟಿಗೆ ಬಂದು ಐದು ವರ್ಷ ಆಗಿದೆ. ಅವರ ಬಗ್ಗೆ ಕೊತ್ವಾಲ್ ರಾಮಚಂದ್ರನ ಶಿಷ್ಯರು ಎಂದು ಮಾಧ್ಯಮದಲ್ಲಿ ಪ್ರಚಾರ ಆಗಿತ್ತು. ಮುನಿರತ್ನ 30 ವರ್ಷ ಕಾಂಗ್ರೆಸ್‌ನಲ್ಲಿ ಇದ್ದರು. ಆವಾಗ ಒಳ್ಳೆಯವನಾಗಿದ್ದ. ಈಗ ಕೆಟ್ಟವನಾಗಿದ್ದಾನೆ. ರಾಯಚೂರಿನಲ್ಲಿ ಪಿಎಸ್‌ಐ ಆತ್ಮಹತ್ಯೆ ಮಾಡಿಕೊಂಡ. ಅವರ ಹೆಂಡತಿ ದೂರು ನೀಡಿದರು. ಬೀದಿಯಲ್ಲಿ ಪ್ರತಿಭಟನೆ ಮಾಡಿ ಬಂಧಿಸಿ ಎಂದು ಕೂಗಿದರು. ಆದರೂ ನೀವು ಯಾಕೆ ಬಂಧಿಸಲಿಲ್ಲ ಎಂದು ಅಶೋಕ್ ಪ್ರಶ್ನೆಮಾಡಿದರು. ನೀವು ನಿಮ್ಮ ಪಾರ್ಟಿಯ ಎಂಎಲ್‌ಎಗೆ ಒಂದು, ಬಿಜೆಪಿ ಎಂಎಲ್‌ಎಗೆ ಒಂದು ರೀತಿ ಮಾಡಬೇಡಿ. ಮುನಿರತ್ನ ತಪ್ಪು ಮಾಡಿದ್ದರೆ ಶಿಕ್ಷೆ ಆಗಲಿ. ನಾವು ಯಾರೂ ಬೆಂಬಲಿಸಲ್ಲ. ಕಾನೂನಿನ ಪ್ರಕಾರ ನೋಟಿಸ್ ಕೊಡಬೇಕಿತ್ತು. ಓಡಿ ಹೋಗಿದ್ದರೆ ಬಂಧಿಸಬೇಕಿತ್ತು. ತಪ್ಪು ಯಾರೇ ಮಾಡಿದ್ದರೂ ಖಂಡಿತ ಶಿಕ್ಷೆ ಆಗಲಿ. ಉಪ್ಪು ತಿಂದವರು ನೀರು ಕುಡಿಬೇಕು. ಅದು ನಮ್ಮ ಸ್ಪಷ್ಟ ನಿಲುವು ಎಂದರು.