ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಯತ್ನ

bjp
Published on

ಹುಬ್ಬಳ್ಳಿ: ಧಾರವಾಡದಲ್ಲಿ ಶುಕ್ರವಾರ ಸಂಜೆ ವೀರ ಸಾವರ್ಕರ್ ಭಾವಚಿತ್ರ ಸುಟ್ಟಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಶನಿವಾರ ಮಧ್ಯಾಹ್ನ ಇಲ್ಲಿಯ ಕಾರವಾರ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಮುತ್ತಿಗೆ ಯತ್ನ ತಡೆಯುವಲ್ಲಿ ಯಶಸ್ವಿಯಾದ ಪೋಲಿಸರು 30ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದರು.

ಇಎಸ್​ಐ ಆಸ್ಪತ್ರೆ ಬಳಿ ಸೇರಿದ ಬಿಜೆಪಿ ಕಾರ್ಯಕರ್ತರು ಅಲ್ಲಿಂದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಕಚೇರಿವರೆಗೆ ಬರುವಲ್ಲಿ ಯಶಸ್ವಿಯಾಗಿದ್ದರು. ಅಲ್ಲಿ ಬಿಜೆಪಿ ಕಾರ್ಯಕರ್ತರನ್ನು ತಡೆಯಲು ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಜ್ಜಾಗಿದ್ದರು.

ಈ ವೇಳೆ ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಸಾವರ್ಕರ್ ಭಾವಚಿತ್ರ ಹಿಡಿದಿದ್ದ ಬಿಜೆಪಿ ಕಾರ್ಯಕರ್ತರು ಮೋದಿ...ಮೋದಿ.. ಸಾವರ್ಕರ್....ಸಾವರ್ಕರ್ ಎಂದು ಘೊಷಣೆ ಕೂಗುತ್ತ ಮುನ್ನುಗ್ಗಲು ಯತ್ನಿಸಿದರು. ಕಾಂಗ್ರೆಸ್.... ಕಾಂಗ್ರೆಸ್ ಎಂದು ಕೈ ಪಡೆಯ ಕಾರ್ಯಕರ್ತರು ಘೊಷಣೆ ಕೂಗುತ್ತ ಬಿಜೆಪಿ ಕಾರ್ಯಕರ್ತರನ್ನು ತಡೆದರು.

ಪರಿಸ್ಥಿತಿಯನ್ನು ನಿಯಂತ್ರಿಸಿದ ಪೋಲಿಸರು ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದು ವಾಹನದಲ್ಲಿ ಸಾಗಿಸಿದರು. ಪೋಲಿಸ್ ಆಯುಕ್ತ ಲಾಭುರಾಮ, ಡಿಸಿಪಿಗಳಾದ ಸಾಹಿಲ ಬಾಗ್ಲಾ, ಗೋಪಾಲ ಬ್ಯಾಕೋಡ, ಎಸಿಪಿ ವಿನೋದ ಮುಕ್ತೆದಾರ, ಆರ್.ಕೆ. ಪಾಟೀಲ ಸ್ಥಳದಲ್ಲಿ ಇದ್ದು ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net