ಕಾಂಗ್ರೆಸ್ ಎರಡು ವರ್ಷದ ಸಾಧನೆ ಶೂನ್ಯ; ಶಾಸಕ ಸಿಮೆಂಟ್ ಮಂಜು

CEMENT MANJU -MLA
Published on

ಹಾಸನ: ಎರಡು ವರ್ಷದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಜತೆಗೆ ಕಾನೂನು ಸುವ್ಯವಸ್ಥೆ ಕುಸಿದು ಸಾಮಾಜಿಕ ಸ್ವಾಸ್ಥೃ ಹದಗೆಟ್ಟಿದೆ ಎಂದು ಆಲೂರು-ಸಕಲೇಶಪುರ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಟೀಕಿಸಿದರು.

ಕಳೆದ ಎರಡು ವರ್ಷಗಳ ಕಾಂಗ್ರೆಸ್ ಆಡಳಿತ ರಾಜ್ಯವನ್ನು ಹಿಂದೆಂದೂ ಕಾಣದ ದುಸ್ಥಿತಿಗೆ ದೂಡಿದೆ. ಇದು ಆಡಳಿತ ನಡೆಸುವ ಸರ್ಕಾರವಲ್ಲ. ಕೇವಲ ವಸೂಲಿ ಸರ್ಕಾರ. ಕಾಂಗ್ರೆಸ್ ಆಡಳಿತ ಕನ್ನಡಿಗರ ಬದುಕಿಗೆ ಶಾಪವಾಗಿದೆ. ಜನನ ಪ್ರಮಾಣಪತ್ರದಿಂದ ಮರಣ ಪ್ರಮಾಣಪತ್ರದವರೆಗೂ ಪ್ರತಿಯೊಂದರಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದರು.

ಕಾಂಗ್ರೆಸ್ ಸರ್ಕಾರ ಎಂದರೆ ಭ್ರಷ್ಟಾಚಾರದ ಕೂಪವಾಗಿದ್ದು, ಪ್ರತಿಯೊಂದು ಕಾಮಗಾರಿಯಲ್ಲೂ 60% ಕಮಿಷನ್ ಪಡೆಯುವ ಸರ್ಕಾರವಾಗಿದೆ. ಪ್ರತಿಯೊಂದು ಯೋಜನೆ, ಟೆಂಡರ್‌ನಲ್ಲೂ ಕಮಿಷನ್ ದಂಧೆ ನಡೆಯುತ್ತಿದೆ. ರಾಜ್ಯವನ್ನು ಕಾಂಗ್ರೆಸ್ ಪಕ್ಷದ ಎಟಿಎಂ ಆಗಿ ಪರಿವರ್ತಿಸಿದ್ದಾರೆ. ಕರ್ನಾಟಕದಲ್ಲಿ ಲೂಟಿ ಮಾಡಿದ ಕೋಟ್ಯಂತರ ಹಣವನ್ನು ಪಕ್ಷದ ಹೈಕಮಾಂಡ್‌ಗೆ ಮತ್ತು ಇತರ ರಾಜ್ಯಗಳ ಚುನಾವಣೆಗಳಿಗೆ ಅಕ್ರಮವಾಗಿ ಸಾಗಿಸುತ್ತಿದ್ದಾರೆ. ವಾಲ್ಮೀಕಿ ನಿಗಮದ 187 ಕೋಟಿ ರೂ. ಲೂಟಿ ಹೊಡೆದು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿರೋಧಿ ನೀತಿಗಳು ಮತ್ತು ಮುಸ್ಲಿಂ ತುಷ್ಟೀಕರಣ ಕಾಂಗ್ರೆಸ್ ಆಶಯಗಳಾಗಿವೆ ಎಂದು ಹೇಳಿದರು.

ವಿಧಾನಸೌಧದಂತಹ ಪವಿತ್ರ ಸ್ಥಳದಲ್ಲೇ ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ದೇಶದ್ರೋಹಿ ಘೋಷಣೆಗಳು ಕೇಳಿಬಂದರೂ, ಸರ್ಕಾರ ಅದನ್ನು ಮರೆಮಾಚಲು ಪ್ರಯತ್ನಿಸುವ ಮೂಲಕ ರಾಷ್ಟ್ರ ವಿರೋಧಿಗಳಿಗೆ ಬೆಂಬಲ ನೀಡುತ್ತಿದೆ. ಇವರದು ಕೇವಲ ಮುಸ್ಲಿಂ ಓಲೈಕೆಯ ರಾಜಕಾರಣ. ಹಿಂದುಗಳ ತೆರಿಗೆ ಹಣವನ್ನು ಒಂದು ಸಮುದಾಯಕ್ಕೆ ಮಾತ್ರ ನೀಡುತ್ತಿದ್ದಾರೆ. ಸರ್ಕಾರಿ ಗುತ್ತಿಗೆ ಕಾಮಗಾರಿಗಳಲ್ಲೂ ಹಿಂದುಗಳಿಗೆ ಅನ್ಯಾಯ ಮಾಡಲಾಗಿದೆ. ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಜಾರಿ ಮಾಡಿ ತಾರತಮ್ಯ ಎಸಗಿದ್ದಾರೆ. ವಕ್ಫ್ ಮಂಡಳಿ ಮೂಲಕ ಹಿಂದುಗಳು ಮತ್ತು ರೈತರ ಆಸ್ತಿಗಳನ್ನು ಕಬಳಿಸಲಾಗುತ್ತಿದೆ ಎಂದು ಆರೋಪಿಸಿದರು.

ಕರ್ನಾಟಕದ ಹೆಮ್ಮೆಯ ರಾಜಧಾನಿ ಬೆಂಗಳೂರನ್ನು ಸಮಸ್ಯೆಗಳ ಆಗರವಾಗಿಸಿದೆ. ಗ್ರೇಟರ್ ಬೆಂಗಳೂರು ಹೆಸರಿನಲ್ಲಿ ಬೆಂಗಳೂರನ್ನು ಮಳೆಯ ನೀರಿನಲ್ಲಿ ಮುಳುಗಿಸಲಾಗಿದೆ. ಬ್ರಾಂಡ್ ಬೆಂಗಳೂರು ಕೇವಲ ಪೊಳ್ಳು ಘೋಷಣೆ. ಬಸ್, ಮೆಟ್ರೋ, ನೀರು, ವಿದ್ಯುತ್, ಪಾರ್ಕಿಂಗ್ ಶುಲ್ಕ, ಸ್ಮಾರ್ಟ್ ವಿದ್ಯುತ್ ಮೀಟರ್, ಡೀಸೆಲ್ ಬೆಲೆ ಏರಿಕೆಗಳಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಎರಡು ವರ್ಷದ ಆಡಳಿತದ ಸಂಭ್ರಮಕ್ಕಾಗಿ ಕಾಂಗ್ರೆಸ್ ಸಮಾವೇಶ ಮಾಡುವ ಬದಲು ಅದೆ ಹಣವನ್ನು ರಾಜ್ಯದ ಅಭಿವೃದ್ಧಿ ಕೆಲಸಕ್ಕೆ ಬಳಕೆ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಖಜಾಂಚಿ ಶೋಭನ್ ಬಾಬು, ನಗರಾಧ್ಯಕ್ಷ ಯೋಗೀಶ್, ಮಂಜು ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net