

ಚಾಮರಾಜನಗರ: ಪ್ರಸ್ತುತ ಸಂದರ್ಭದಲ್ಲಿ ರಾಜ್ಯಕ್ಕೆ ಸಿದ್ದರಾಮಯ್ಯ ಅವರೇ ಸೂಕ್ತ ಮುಖ್ಯಮಂತ್ರಿಯಾಗಿದ್ದು, ಕಾಂಗ್ರೆಸ್ ಉಳಿದಿದೆ ಎಂಬುದಕ್ಕೆ ಸಿದ್ದರಾಮಯ್ಯ ಅವರೇ ಕಾರಣ ಎಂದು ಸಾಹಿತಿ ಕುಂ.ವೀರಭದ್ರಪ್ಪ ಹೇಳಿಕೆ ನೀಡಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಬಿಜೆಪಿ ಆಪಾದನೆ ಮಾಡಿಕೊಂಡೇ ಬರುತ್ತಿದೆ. ಸಿದ್ದರಾಮಯ್ಯ ಅವರನ್ನು ಇಳಿಸಿ ಎಂದು ಪ್ರತಿಭಟನೆ ಮಾಡುತ್ತಿದೆ. ಯಾವ ಕಾರಣಕ್ಕೆ ಸಿದ್ದರಾಮಯ್ಯ ಅವರನ್ನು ಇಳಿಸುತ್ತೀರಿ? ಈ ಸಂದರ್ಭದಲ್ಲಿ ಕರ್ನಾಟಕಕ್ಕೆ ಸಿದ್ದರಾಮಯ್ಯ ಅವರೇ ಸೂಕ್ತ ಮುಖ್ಯಮಂತ್ರಿ. ಕಾಂಗ್ರೆಸ್ ಉಳಿದಿದೆ ಎಂದರೇ ಸಿದ್ದರಾಮಯ್ಯ ಅವರೇ ಕಾರಣ. ಭಾರತದಲ್ಲಿ ಯಾರಾದರೂ ಪ್ರಬಲ ಸಿಎಂ ಇದ್ದರೇ ಅದು ಸಿದ್ದರಾಮಯ್ಯ ಎಂದು ಹೇಳಿದರು.
ಎಲ್ಲಾ ರಾಜಕಾರಣಿಗಳು ಮುಡಾದಲ್ಲಿ ಸೈಟ್ ಮಾಡಿದ್ದಾರೆ. ರಾಜಕಾರಣಿಗಳು ಸಂಬಂಧಿಕರ ಹೆಸರಲ್ಲಿ ಸೈಟ್ ಮಾಡಿದ್ದಾರೆ. 14 ಸೈಟ್ ವಿವಾದ ಆಗಿರುವುದು ತಾಂತ್ರಿಕ ಕಾರಣದಿಂದ. ಸೈಟ್ ಹಿಂತಿರುಗಿಸಿದ ಬಳಿಕ ಬಾಯಿ ಮುಚ್ಚಿಕೊಂಡು ಇರಬೇಕಲ್ಲವೇ. ಅನಾವಶ್ಯಕವಾಗಿ ಕಾರಣ ಇಲ್ಲದೇ ಸಿದ್ದರಾಮಯ್ಯ ಪದಚ್ಯುತಗೊಳಿಸಲು ನಡೆಸಿರುವ ಸಂಚು ಇದಾಗಿದೆ ಎಂದು ಆರೋಪಿಸಿದರು.
ಕಸಪಾ ರಾಜ್ಯಾಧ್ಯಕ್ಷರ ವಿರುದ್ಧ ಕಿಡಿ:
ಮತೀಯ ಶಕ್ತಿ ಬೆಂಬಲದಿಂದ ಅಧಿಕಾರ ಪಡೆದಿರುವ ಮಹೇಶ್ ಜೋಷಿ ಕನ್ನ ಸಾಹಿತ್ಯ ಪರಿಷತ್‌ಗೆ ಕಾಲಿಟ್ಟ ಕ್ಷಣದಿಂದ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಕಸಾಪದಲ್ಲಿ ಈಗ ಪ್ರಜಾಪ್ರಭುತ್ವ ಇಲ್ಲ. ಜಿಲ್ಲಾಧ್ಯಕ್ಷ, ತಾಲೂಕು ಅಧ್ಯಕ್ಷರಿಗೆ ಸ್ವಾತಂತ್ರ್ಯ ಇಲ್ಲದಂತಾಗಿದೆ ಎಂದು ಮಹೇಶ್ ಜೋಷಿ ವಿರುದ್ಧ ಕಿಡಿಕಾರಿದರು. ಸಾಹಿತ್ಯೇತರ ಶಕ್ತಿಗಳು, ಮತೀಯ ಶಕ್ತಿಗಳು ಮಂಡ್ಯ ಸಮ್ಮೇಳನಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಸಾಹಿತ್ಯೇತರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಬೇಕು ಎಂಬುದು ಅಪ್ರಬುದ್ಧ ನಿಲುವಾಗಿದೆ. ಯಾವ ಕಾರಣಕ್ಕೂ ಸಾಹಿತ್ಯೇತರು ಸಮ್ಮೇಳನದ ಅಧ್ಯಕ್ಷರಾಗಬಾರದು. ಅದು ಕನ್ನಡ ಪರಿಷತ್ ಅಲ್ಲ, ಕನ್ನಡ ಸಾಹಿತ್ಯ ಪರಿಷತ್, ಆಗಾಗಿ ಸಾಹಿತಿಗಳಿಗೆ ಪ್ರಾಧಾನ್ಯತೆ ಕೊಡಬೇಕು. ಸಾಹಿತ್ಯ ಲೋಕದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದವರು ಅಧ್ಯಕ್ಷರಾಗಬೇಕು ಎಂದು ಆಗ್ರಹಿಸಿದರು.