ಕಾಂಗ್ರೆಸ್ ಆರೋಪದಲ್ಲಿ ಹುರುಳಿಲ್ಲ; ಸಂಸದ ನಾರಾಯಣಸ್ವಾಮಿ ಸ್ಪಷ್ಟನೆ; ಗೋದಾಮಿನಲ್ಲಿರುವ ಸ್ಟಾಕ್ ಪರಿಶೀಲಿಸಿ ತಪ್ಪಾಗಿದ್ದರೆ ಎಫ್‌ಐಆರ್ ದಾಖಲಿಸಿ

03ank news and photos 01 (2)
Published on

ಆನೇಕಲ್: ಸರ್ಜಾಪುರದ ಎಂಎಸ್‌ಪಿಸಿ ಕೇಂದ್ರದ ಕಾರ್ಮಿಕರಿಂದ ಎಸ್‌ಟಿಆರ್‌ಆರ್ ಪ್ರಾಧಿಕಾರದ ಅಧ್ಯಕ್ಷ ಮುನಿರಾಜು ಅವರು ಸಕ್ಕರೆ ಪ್ಯಾಕೆಟ್‌ಗಳನ್ನು ಎಂಎಸ್‌ಪಿಸಿ ಮೂಲಕ ಮಾಡಿಸಿಕೊಂಡಿದ್ದು, ಇದರಲ್ಲಿ ಅಕ್ರಮ ನಡೆದಿದೆ ಎಂಬ ಕಾಂಗ್ರೆಸ್ ಆರೋಪದಲ್ಲಿ ಹುರುಳಿಲ್ಲ ಎಂದು ಚಿತ್ರದುರ್ಗ ಸಂಸದರ ನಾರಾಯಣಸ್ವಾಮಿ ಸ್ಪಷ್ಟನೆ ನೀಡಿದರು.

ಸರ್ಜಾಪುರದ ಎಂಎಸ್‌ಪಿಸಿ ಕೇಂದ್ರ ಸರ್ಕಾರದ ಉದ್ಯಮ ಅಲ್ಲ, ಅದು ಸ್ತ್ರೀಶಕ್ತಿ ಸಂಘ. ಯಾವುದೇ ಕಾಂಟ್ರಾಕ್ಟ್ ಆದರೂ ಪಡೆಯುವ ಅಧಿಕಾರ ಸಂಘಕ್ಕಿದೆ ಎಂದು ಭಾನುವಾರ ಸುದ್ದಿಗೋಷ್ಠಿ ತಿಳಿಸಿದರು.

ಸಂಸದ ಸುರೇಶ್, ಉಗ್ರಪ್ಪ ಹಾಗೂ ಶಾಸಕ ಶಿವಣ್ಣ, ಈ ರೀತಿಯ ರಾಜಕಾರಣ ಮಾಡಲು ಮುಂದಾಗಿರುವುದು ನೋವಿನ ಸಂಗತಿ. ತಾಲೂಕು ಬಿಜೆಪಿ ಕಾರ್ಯಕರ್ತರಿಗೆ ಕಳ್ಳತನ ಮಾಡಿ ಸಕ್ಕರೆ ಹಂಚುವ ಪರಿಸ್ಥಿತಿ ಇಲ್ಲ. ಎಸ್‌ಟಿಆರ್‌ಆರ್ ಗೋದಾಮಿನಲ್ಲಿರುವ ಸ್ಟಾಕ್ ಪರಿಶೀಲಿಸಿ, ತಪ್ಪಾಗಿದ್ದರೆ ಎಫ್‌ಐಆರ್ ದಾಖಲಿಸಿ. ಅದನ್ನು ಬಿಟ್ಟು ಪೊಲೀಸರ ಮೇಲೆ ಒತ್ತಡ ತರುವ ಮನೋಭಾವ ಡಿ.ಕೆ.ಸುರೇಶ್‌ಗೆ ಒಳಿತಲ್ಲ. ಉಗ್ರಪ್ಪ ಹಾಗೂ ಶಾಸಕ ಶಿವಣ್ಣ ಈ ವಿಚಾರದಲ್ಲಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ್ ಮಾತನಾಡಿ, ತಾಲೂಕಿನ 70 ಭಾಗಗಳಲ್ಲಿ ಪ್ರತಿದಿನ ಬಿಜೆಪಿ ಕಾರ್ಯಕರ್ತರು ದಾಸೋಹ ಮಾಡುತ್ತಿದ್ದು ಇದನ್ನು ಸಹಿಸಲಾಗದೆ ಶಾಸಕ ಬಿ.ಶಿವಣ್ಣ ಸಣ್ಣ ರಾಜಕಾರಣ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್, ಉಗ್ರಪ್ಪ ಕೈ ಜೋಡಿಸಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ಬೆಂಗಳೂರು ನಗರ ಜಿಪಂ ಅಧ್ಯಕ್ಷ ಮರಿಸ್ವಾಮಿ ಮಾತನಾಡಿ, ಈಗಾಗಲೇ ಸಾವಿರಾರು ಜನರಿಗೆ ಮುನಿರಾಜು ಅವರು ಆಹಾರ ಕಿಟ್ ವಿತರಿಸಿದ್ದಾರೆ. ಕಾಂಗ್ರೆಸ್ ಆರೋಪದಲ್ಲಿ ಹುರುಳಿಲ್ಲ ಎಂದರು.

ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಯಣ್ಣ, ಬಿಜೆಪಿ ಆನೇಕಲ್ ತಾಲೂಕು ಮಂಡಲ ಅಧ್ಯಕ್ಷ ಎಸ್‌ಆರ್‌ಟಿ ಅಶೋಕ್, ಜಯಪ್ರಕಾಶ್ ರೆಡ್ಡಿ, ಜಿಪಂ ಸದಸ್ಯರಾದ ನರಸಿಂಹಮೂರ್ತಿ, ನಾಗೇಶ್‌ರೆಡ್ಡಿ, ತಾಪಂ ಮಾಜಿ ಅಧ್ಯಕ್ಷ ಮುರಳಿಕೃಷ್ಣ, ಬಿಜೆಪಿ ಯುವಮೋರ್ಚಾ ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷ ಸೋಂಪುರ ಪುನೀತ್, ಎಸ್ಸಿ ಮೋರ್ಚಾ ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷ ಶ್ರೀನಿವಾಸ್, ಬಿಜೆಪಿ ಯುವಮೋರ್ಚಾ ಬೆಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷ ಬಳ್ಳೂರು ವಸಂತ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಉಚ್ಚಯ್, ಗ್ರಾಪಂ ಸದಸ್ಯ ಅರವಿಂದ ರೆಡ್ಡಿ ಇತರರಿದ್ದರು.

ಕನಕಪುರದಲ್ಲಿ ಅಕ್ರಮ ಗಣಿಗಾರಿಕೆ ಮಾಡಿ ತಿಹಾರ್ ಜೈಲಿಗೆ ಹೋದವರಿಂದ ನೈತಿಕತೆ ಪಾಠ ಕಲಿಯಬೇಕಿಲ್ಲ. ನನ್ನ ಮೇಲಿನ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ. ಆದರೆ ಈ ಕೆಲಸವನ್ನು ಡಿ.ಕೆ.ಶಿವಕುಮಾರ್ ಡಿ.ಕೆ.ಸುರೇಶ್, ಉಗ್ರಪ್ಪ ಹಾಗೂ ಶಾಸಕ ಬಿ.ಶಿವಣ್ಣ ಮಾಡುತ್ತಾರಾ?

ಸಿ.ಮುನಿರಾಜು, ಎಸ್‌ಟಿಆರ್‌ಆರ್ ಪ್ರಾಧಿಕಾರದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net