ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ಲಸಿಕೆ ವ್ಯರ್ಥ

h17-BJP
Published on

ಹುಬ್ಬಳ್ಳಿ: ಒಂದು ವರ್ಷದ ಹಿಂದೆ ಭಾರತದಲ್ಲಿ ಆರಂಭಗೊಂಡ ಕೋವಿಡ್ ಲಸಿಕೆ ಅಭಿಯಾನ ಯಶಸ್ವಿಯಾಗಿದೆ. ಈ ಮಧ್ಯೆ ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳಲ್ಲಿ ಉದ್ದೇಶಪೂರಕವಾಗಿ ಲಸಿಕೆಗಳನ್ನು ವ್ಯರ್ಥ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಆರೋಪಿಸಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾರ್ಖಂಡ್​ನಲ್ಲಿ ಶೇ. 37.3ರಷ್ಟು, ಛತ್ತಿಸಗಢದಲ್ಲಿ ಶೇ. 30.2ರಷ್ಟು ಮತ್ತು ತಮಿಳುನಾಡಿನಲ್ಲಿ ಶೇ. 15.5ರಷ್ಟು ಲಸಿಕೆ ವ್ಯರ್ಥಗೊಂಡಿದೆ. ರಾಜಸ್ಥಾನದಲ್ಲಿ ಶೇ. 25ರಷ್ಟು ಲಸಿಕೆ ವ್ಯರ್ಥಗೊಂಡಿದೆ ಎಂದು ದೂರಿದರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಅವರು ದೇಶದಲ್ಲಿ ಲಸಿಕೆ ಕೊರತೆ ಇದೆ ಎಂಬ ಸುಳ್ಳು ಆರೋಪ ಮಾಡುತ್ತಿದ್ದರು. ಕೆಲ ಕಾಂಗ್ರೆಸ್ ಮುಖಂಡರು ಲಸಿಕೆಯಿಂದ ಅಡ್ಡಪರಿಣಾಮಗಳಿವೆ ಎಂಬ ಆರೋಪ ಮಾಡಿದರು. ಪ್ರತಿಪಕ್ಷಗಳ ಆರೋಪ ನಿರ್ಲಕ್ಷಿಸಿ ಜನರು ಲಸಿಕೆ ಪಡೆದುಕೊಂಡಿದ್ದಾರೆ. ದೇಶದ ಪ್ರತಿಯೊಬ್ಬರೂ ಲಸಿಕೆ ಪಡೆದುಕೊಂಡಿದ್ದರಿಂದ ಕೋವಿಡ್ 3ನೇ ಅಲೆಯಲ್ಲಿ ಹೆಚ್ಚಿನ ಪ್ರಾಣಹಾನಿ ಸಂಭವಿಸಲಿಲ್ಲ ಎಂದು ಹೇಳಿದರು. ಇದುವರೆಗೆ 157 ಕೋಟಿಗೂ ಹೆಚ್ಚು ಲಸಿಕೆ ನೀಡಲಾಗಿದೆ. ಸುಮಾರು 66 ಕೋಟಿ ಜನರು ಸಂಪೂರ್ಣ ಲಸಿಕೆ ಪಡೆದುಕೊಂಡಿದ್ದರೆ, 92 ಕೋಟಿ ಜನರು ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. ನಿತ್ಯ ಸುಮಾರು 43 ಲಕ್ಷ ಡೋಸ್​ಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು. 15 ರಿಂದ 17 ವರ್ಷದ ಮಕ್ಕಳಿಗೆ ಲಸಿಕೆ ಅಭಿಯಾನ ಪ್ರಾರಂಭಗೊಂಡ 10 ದಿನಗಳಲ್ಲಿ 3 ಕೋಟಿಗೂ ಹೆಚ್ಚು ಮಕ್ಕಳಿಗೆ ಮೊದಲ ಡೋಸ್ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಸೆ. 17ರಂದು ಏರ್ಪಡಿಸಿದ್ದ ಅಭಿಯಾನದಲ್ಲಿ ಒಂದೇ ದಿನ 2.5 ಕೋಟಿಗೂ ಹೆಚ್ಚು ಲಸಿಕೆ ನೀಡಲಾಯಿತು ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಕಪಟಕರ, ಗ್ರಾಮೀಣ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ವಕ್ತಾರ ರವಿ ನಾಯಕ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net