ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಪ್ರತಿಭಟನೆ

Published on

ಮೈಸೂರು: ಉದ್ಯಮಿ ಅದಾನಿಗೆ ಸೇರಿದ ಸಂಸ್ಥೆಯ ನಷ್ಟ ಪ್ರಕರಣ ಕುರಿತು ನೈಜತೆ ಸಂಗತಿ ಹೊರ ಬೀಳಲು ಆರ್‌ಬಿಐ ಹಾಗೂ ಸೆಬಿಯಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ನಗರ ಕಾಂಗ್ರೆಸ್ ಸಮಿತಿ ಮತ್ತು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದಿಂದ ಸೋಮವಾರ ಪ್ರತಿಭಟನೆ ನಡೆಯಿತು.
ಬನ್ನಿಮಂಟಪದ ಎಲ್‌ಐಸಿ ಕಚೇರಿ ಬಳಿ ಇರುವ ಟಿ.ಎನ್.ನರಸಿಂಹಮೂರ್ತಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಲೋಕಸಭೆಯಲ್ಲಿ ಕಂಪನಿಯಿಂದ ಜನರಿಗೆ ಅಗುತ್ತಿರುವ ತೊಂದರೆ ಕುರಿತು ಚರ್ಚೆಗೆ ಪ್ರತಿಪಕ್ಷಗಳಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಸಂಸ್ಥೆ ನಷ್ಟದಲ್ಲಿದೆ ಎಂದು ಮಾಲೀಕರೇ ಹೇಳುತ್ತಿರುವಾಗ ಕೇಂದ್ರ ಸರ್ಕಾರ ಮಾತ್ರ ಎಲ್ಲ ಸಹಕಾರ ನೀಡುತ್ತಿದೆ. ಇದರಿಂದ ಜನರಲ್ಲಿ ತಪ್ಪು ಭಾವನೆ ಮೂಡಿಸಲಾಗುತ್ತಿದೆ. ಆದ್ದರಿಂದ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ಮಾತನಾಡಿ, ಪ್ರಪಂಚದಲ್ಲಿಯೇ ನಾನು ಒಬ್ಬ ಅತ್ಯಂತ ಶ್ರೀಮಂತ ಎಂದು ಬಿಂಬಿಸಿಕೊಂಡು ಸುಳ್ಳು ಲೆಕ್ಕಪತ್ರಗಳನ್ನು ನೀಡಿ ದೇಶದ ಜನತೆಗೆ ಮೋಸ ಮಾಡಿರುವ ಅದಾನಿ ಅವರಿಗೆ ಕೇಂದ್ರ ಸರ್ಕಾರ ಸಂಪೂರ್ಣ ಸಹಕಾರ ನೀಡಿದೆ. 70 ವರ್ಷಗಳ ಆಡಳಿತದಲ್ಲಿ ಕಾಂಗ್ರೆಸ್ ಈ ದೇಶಕ್ಕೆ ಭದ್ರ ಬುನಾದಿ ಹಾಕಿತ್ತು. ಈಗ ಸಾರ್ವಜನಿಕ ವಲಯದ ಕೈಗಾರಿಕೆಗಳನ್ನು ಖಾಸಗಿ ಅವರಿಗೆ ಮಾರಾಟ ಮಾಡಿ ದೇಶವನ್ನು ದಿವಾಳಿಯತ್ತ ದೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ತನ್ನ ಲಾಭಕ್ಕಾಗಿ ಸಾರ್ವಜನಿಕ ಸಂಸ್ಥೆಗಳಾದ ಎಸ್‌ಬಿಐ, ಎಲ್‌ಐಸಿ ಹಾಗೂ ಇನ್ನಿತರ ಕಂಪನಿಗಳನ್ನು ದುರುಪಯೋಗಪಡಿ ಸಿಕೊಂಡಿದೆ. ಈ ಬಗ್ಗೆ ಲೋಕಸಭೆಯಲ್ಲಿ ಚರ್ಚಿಸಲು ಪ್ರತಿಪಕ್ಷಗಳು ಸಮಯ ಕೇಳಿದರೂ ಸರ್ಕಾರ ನೀಡದಿರುವುದು ಖಂಡನೀಯ ಎಂದರು.
ಅಸ್ರತ್‌ವುಲ್ಲ ಖಾನ್, ಸೈಯದ್ ಇಕ್ಬಾಲ್, ಕಮಲ ಅನಂತರಾಮನ್, ಶಾಬೋಜುದ್ದಿನ್, ಸೈಯದ್ ಫಾರೂಕ್, ಮಜರ್ ಪಾಷ, ನವಾಜ್, ಕುಮಾರ್, ಸಲೀಂ, ಇಂತಿಯಾಜ್ ಪಾಷ, ಅಜ್ಮಲ್, ಅಜರ್, ರಾಮನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net