ಕಾಂಗ್ರೆಸ್ ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ: ಗೃಹ ಸಚಿವ ಡಾ.ಜಿ. ಪರಮೇಶ್ವರ್

parameshwar
Published on

ಹಾಸನ: ವಿರೋಧ ಪಕ್ಷಗಳು ಏನೇ ಮಾತನಾಡಲಿ. ಆದರೆ ನಾವು ನೀಡಿದ ಭರವಸೆಗಳನ್ನು ಈಡೇರಿಸುತ್ತಿದ್ದೇವೆ. ಇದನ್ನು ತಿಳಿಸುವ ಸಲುವಾಗಿ ಈ ಸಮಾವೇಶ ಮಾಡುತ್ತಿದ್ದೇವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.

ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಿಎಂ ನೇತೃತ್ವದಲ್ಲಿ ನೀಡಿದ್ದ ಗ್ಯಾರಂಟಿಗಳನ್ನು ಅನಿಷ್ಠಾನಕ್ಕೆ ತಂದಿದ್ದೇವೆ. ಗ್ಯಾರಂಟಿಗಳಿಂದ ಸರ್ಕಾರ ದಿವಾಳಿಯಾಗಿದೆ ಅಂತ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಅಲ್ಲಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮಲ್ಲಿ ಯಾವುದೇ ಒಡಕು, ಭೇದ-ಭಾವ ಇಲ್ಲ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಬೇರೆಯವರ ತಟ್ಟೆಯಲ್ಲಿ ನೊಣ ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಯಾವ ಪಕ್ಷ ಜಾತ್ಯತೀತ ಅಂತ ಹೇಳಿಕೊಂಡು 25 ವರ್ಷಗಳಿಂದ ಹಾಸನ ಜಿಲ್ಲೆಯ ಜನರಿಗೆ ಮೋಸ ಮಾಡಿದ್ದೀರಿ. ಈಗ ಕೋಮುವಾದಿ ಪಕ್ಷ ಸೇರಿ ತಮ್ಮ ನಿಜವಾದ ಬಣ್ಣವನ್ನು ಪ್ರದರ್ಶಿಸಿದ್ದಿರಾ. ರಾಜ್ಯದಲ್ಲಿ ಹಿಜಾಬ್, ಗೊ ಹತ್ಯೆ ವಿವಾದ ಮಾಡಿದರು. ಈಗ ಮುಡಾ, ವಕ್ಫ್ ಬಗ್ಗೆ ಮಾತನಾಡುತ್ತಿದ್ದಾರೆ. ವಕ್ಫ್ ಪ್ರಕರಣದಲ್ಲಿ ಯಾವ ಸರ್ಕಾರದಲ್ಲಿ ರೈತರಿಗೆ ಹೆಚ್ಚಿನ ನೋಟೀಸ್ ನೀಡಲಾಗಿದೆ ಎಂಬುದನ್ನು ಮೊದಲು ಹೇಳಲಿ ಎಂದು ಬಿಜೆಪಿಗೆ ಸವಾಲು ಹಾಕಿದರು.

ಕೇಂದ್ರದ ತನಿಖಾ ಏಜೆನ್ಸಿಗಳನ್ನು ಬಳಸಿಕೊಂಡು ಸಿದ್ದರಾಮಯ್ಯ ಅವರನ್ನು ಸರ್ಕಾರವನ್ನು ಅಸ್ಥಿರಗೊಳಿಸಲು ನೋಡುತ್ತಿದ್ದಾರೆ. ಆದರೂ ಜನರು ಮೂರೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸುವ ಮೂಲಕ ಉತ್ತರ ನೀಡಿದ್ದಾರೆ ಎಂದು ತಿರುಗೇಟು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net