

ಹೊಳೆನರಸೀಪುರ: ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ದಿವಂಗತ ಜಿ.ಪುಟ್ಟಸ್ವಾಮಿಗೌಡರ ಮೊಮ್ಮಗ ಶ್ರೇಯಸ್ ಎಂ.ಪಟೇಲ್ ತಮ್ಮ ಕುಟುಂಬ ಸಮೇತ ಅಪಾರ ಜನಸ್ತೋಮದೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ತಾಲೂಕು ಕಚೇರಿಗೆ ತಾಯಿ ಅನುಪಮಾ ಮಹೇಶ್, ಪತ್ನಿ ಕೆ ಎಲ್ ಅಕ್ಷತಾ, ಅವರೊಂದಿಗೆ ಆಗಮಿಸಿದ ಶ್ರೇಯಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್ ಟಿ ಲಕ್ಷ್ಮಣ್, ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇ ಹೆಚ್ ಲಕ್ಷ್ಮಣ್, ದುದ್ಧ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ, ಸಾಮಾಜಿಕ ಜಾಲತಾಣದ ಸಂಚಾಲಕ ಮುಜಾಹಿದ್ ಬಾಷಾ, ಕಾಂಗ್ರೆಸ್ ಮುಖಂಡ ಬಾಗೇವಾಳು ಮಂಜೇಗೌಡ ಇವರ ಜತೆಗೂಡಿ ಮಂಗಳವಾರ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸುವ ಮೊದಲು ತಮ್ಮ ತಾಯಿಯ ಆಶೀರ್ವಾದ ಪಡೆದರು. ಮಗನನ್ನು ಅಪ್ಪಿಕೊಂಡ ಅವರ ತಾಯಿ ಅನುಪಮಾ ಭಾವುಕರಾದರು. ಈ ಸನ್ನಿವೇಶ ನೆರೆದಿದ್ದ ಜನತೆಗೆ ಮೂಕವಿಸ್ಮಿತರನ್ನಾಗಿಸಿತು.
ಪಟ್ಟಣದ ಆರಾಧ್ಯ ದೈವ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಿ, ನಂತರ ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಡಾ. ಬಿ ಆರ್ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಸುಮಾರು 10 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಮೆರವಣಿಗೆ ಉದ್ದಕ್ಕೂ ಜೈಕಾರ ಮೊಳಗಿಸುತ್ತ ಸಾಗಿದ್ದು ಗಮನ ಸೆಳೆಯಿತು. ದಲಿತ ಮುಖಂಡರಾದ ಎಂ. ಸೋಮಶೇಖರ್, ವಿಜಯಕುಮಾರ್, ರಾಮಚಂದ್ರ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಸವರಾಜು, ಸುದರ್ಶನ್ ಬಾಬು, ಪುಟ್ಟರಾಜು, ಹೇಮಂತ್ ಕುಮಾರ್, ಜಗನ್ನಾಥ್ ಇತರರಿದ್ದರು.
ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೇಯಸ್, ನಮ್ಮ ತಾತಾ ಜಿ.ಪುಟ್ಟಸ್ವಾಮಿಗೌಡ, ತಾಯಿ ಅನುಪಮಾ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರ ಆಶೀರ್ವಾದಗಳೊಂದಿಗೆ ನಾಮಪತ್ರ ಸಲ್ಲಿಸಿದ್ದೇನೆ ಎಂದರು.
ನಮ್ಮ ಕ್ಷೇತ್ರದ ಜನತೆಯ ಸಹಕಾರದೊಂದಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ನಾನು ಪ್ರಚಂಡ ಬಹುಮತದಿಂದ ಆಯ್ಕೆಯಾಗಿ ಬರುತ್ತೇನೆ. ನನ್ನ ಗೆಲುವು ಈ ಕ್ಷೇತ್ರದ ಜನತೆಯ ಗೆಲುವು. ನನ್ನ ಆಯ್ಕೆಯಿಂದ ಈ ತಾಲೂಕಿನ ಜನತೆಗೆ ಸ್ವಾತಂತ್ರ ಲಭಿಸಲಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ಹಾಗೂ ನಾಯಕರ, ಕಾರ್ಯಕರ್ತರ ಬೆಂಬಲ ನನ್ನ ಗೆಲುವಿಗೆ ಸಹಕಾರಿಯಾಗಲಿದೆ. ನಮ್ಮ ತಾತ ಪುಟ್ಟಸ್ವಾಮಿಗೌಡರ ಹಾಗೂ ಎ. ದೊಡ್ಡೇಗೌಡರ ಅವಧಿಯಲ್ಲಿ ದೊರೆತಂತಹ ಭಾರಿ ಗೆಲುವು ಈ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ ಮರುಕಳಿಸಲಿದೆ ಎಂದರು.