

ಹಾಸನ: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭಾರಿ ಬಹುಮತದೊಂದಿಗೆ ರಾಜ್ಯದಲ್ಲಿ ಸರ್ಕಾರ ರಚಿಸಲು ಸಿದ್ಧರಾಗಿರುವ ಹಿನ್ನಲೆಯಲ್ಲಿ ಹಾಸನದಲ್ಲಿ ಶನಿವಾರ ಸಂಜೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಮುಖಂಡರು ಸಿಹಿ ಹಂಚಿ ಸಂಭ್ರಮಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಸಂಯೋಜಕ ಅನಿಲ್, ಅಭೂತಪೂರ್ವ ಗೆಲುವನ್ನು ನಮ್ಮ ಕಾಂಗ್ರೆಸ್ ಪಕ್ಷ ಸಾಧಿಸಿದೆ. ಎಲ್ಲಾ ಕಾರ್ಯಕರ್ತರಿಗೆ, ಮುಂಚೂಣಿ ಘಟಕದ ಎಲ್ಲಾ ಪದಾಧಿಕಾರಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು 135 ಸ್ಥಾನವನ್ನು ಗಳಿಸಿದೆ. ನಮ್ಮ ಪಕ್ಷದ ನಾಯಕರಾದ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ, ವಿಶೇಷವಾಗಿ ನಮ್ಮ ಜಿಲ್ಲೆಯ ಉಸ್ತುವಾರಿಗಳಾದಂತಹ ಡಿ.ಕೆ. ಸುರೇಶ್ ಬಂದ ಮೇಲೆ ನಮ್ಮ ಜಿಲ್ಲೆಗೆ ಶಕ್ತಿ ಬಂದಂತಾಗಿದೆ ಎಂದರು.
ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆ ಬಾರದಿದ್ದರೂ ಕಳೆದ ಬಾರಿಗಿಂತ ಅತೀ ಹೆಚ್ಚಿನ ಮತಗಳನ್ನು ಪಡೆದಿದ್ದೇವೆ. ಮುಂದಿನ ದಿನಗಳಲ್ಲಿ ವ್ಯವಸ್ಥಿತ ಸಂಘಟನೆ ಮಾಡಿಕೊಂಡು ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮ ವಹಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ದೆೇವರಾಜೇಗೌಡ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದಲ್ಲಿ ಅರಸೀಕೆರೆ ಕ್ಷೇತ್ರದಲ್ಲಿ ಮಾತ್ರ ನಾವು ಗೆಲುವು ಪಡೆದಿದ್ದೇವೆ. ಉಳಿದ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿದೆ. ಈ ಸೋಲು ಮುಂದಿನ ದಿನಗಳಲ್ಲಿ ಗೆಲುವಿನ ಮೆಟ್ಟಿಲಾಗಿ ಮಾಡಿಕೊಳ್ಳಲಾಗುವುದು. ಪಕ್ಷದ ಅಭ್ಯರ್ಥಿಗಳಿಗಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಜಿಲ್ಲೆಯಲ್ಲಿ ಏಕೈಕ ವ್ಯಕ್ತಿ ಕಾಂಗ್ರೆಸ್‌ನಿಂದ ಗೆದ್ದಿದ್ದಾರೆ. ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ಕೆ.ಎಂ. ಶಿವಲಿಂಗೇಗೌಡ ಹಾಗೂ ಜಿಲ್ಲಾ ಉಸ್ತುವಾರಿಯಾದ ಡಿ.ಕೆ. ಸುರೇಶ್ ನೇತೃತ್ವದಲ್ಲಿ ಹೆಚ್ಚು ಅನುದಾನ ತಂದು ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡಲಾಗುವುದು. ನಮ್ಮ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ಪ್ರಯತ್ನದಿಂದ ರಾಜ್ಯದಲ್ಲಿ ಹೆಚ್ಚು ಮತಗಳನ್ನು ಪಡೆಯಲು ಸಾಧ್ಯವಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್ ಮಾತನಾಡಿ, ಇಡೀ ರಾಜ್ಯದಲ್ಲಿ ಜನರು ಬದಲಾವಣೆ ಬಯಸಿ ನಮ್ಮ ಪಕ್ಷಕ್ಕೆ 135 ಸೀಟು ಕೊಟ್ಟಿದ್ದಾರೆ. ಜಿಲ್ಲೆಯಲ್ಲಿ ಏಳಕ್ಕೆ ಏಳು ಸೀಟು ಗೆಲ್ಲುವ ವಿಶ್ವಾಸದಿಂದ ಕೆಲಸ ಮಾಡಿದ್ದೇವೆ. ಜಿಲ್ಲಾ ಉಸ್ತುವಾರಿ ಡಿ.ಕೆ. ಸುರೇಶ್ ಅವರ ಮಾರ್ಗದರ್ಶನದಲ್ಲಿ ನಮ್ಮ ಸಂಯೋಜಕ ಅನಿಲ್ ನಿರ್ದೇಶನದಲ್ಲಿ ಶ್ರಮ ವಹಿಸಿದ್ದೇವೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ದೇವೆ ಎಂದರು. ಇದೇ ವೇಳೆ ಕಾಂಗ್ರೆಸ್ ಮುಖಂಡರಾದ ಆನಂದ್, ಮಲ್ಲಿಗೆವಾಳ್ ದೇವಪ್ಪ, ಪ್ರಕಾಶ್, ಅಶೋಕ್ ಕುಮಾರ್ ಇತರರು ಪಾಲ್ಗೊಂಡಿದ್ದರು.