

ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಧೀರಜ್ ಸಾಹು ಹಾಗೂ ಅವರ ಸಂಬಂಧಿಕರ ನಿವಾಸಗಳಲ್ಲಿ ಸಿಕ್ಕ ಕೋಟ್ಯಂತರ ರೂಪಾಯಿ ಹಣದ ಮೂಲ ಯಾವುದು ಎಂಬುದನ್ನು ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಪ್ಪು ಹಣದ ಕುಬೇರ ಕಾಂಗ್ರೆಸ್‌ನಿಂದ ಮೂರು ಬಾರಿ ರಾಜ್ಯಸಭೆ ಸದಸ್ಯರಾಗಿದ್ದ ಧೀರಜ್ ಸಾಹು ಅವರ ಮನೆಯಲ್ಲಿ 30 ಲಾಕರ್‌ಗಳಲ್ಲಿ ನೋಟಿನ ಕಂತೆಗಳು ಸಿಕ್ಕಿರುವುದು ದೇಶದ ಇತಿಹಾಸದಲ್ಲಿ ಮೊದಲಾಗಿದೆ. ಆದಾಯ ತೆರಿಗೆ ಅಧಿಕಾರಿಗಳು ಭ್ರಷ್ಟ ರಾಜಕಾರಣಿಯನ್ನು ಬಲೆಗೆ ಬೀಳಿಸಿರುವುದು ಅಭಿನಂದನಾರ್ಹ. ಅಲ್ಲಿ ಸಿಕ್ಕ ಹಣವನ್ನು ಲೆಕ್ಕಹಾಕಲು ತಂದಂತಹ ಯಂತ್ರಗಳು ಸಾಕಾಗಲಿಲ್ಲ. ಈ ಹಣವನ್ನು ತೆಗೆದುಕೊಂಡು ಹೋಗಲು ತೆರಿಗೆ ಇಲಾಖೆಯವರಿಗೆ 150ಕ್ಕೂ ಹೆಚ್ಚು ಬ್ಯಾಗ್‌ಗಳು ಬೇಕಾದವು ಎಂದು ತಿಳಿದು ತುಂಬಾ ವ್ಯಥೆಯಾಗುತ್ತಿದೆ ಎಂದರು.
ದೇಶದಲ್ಲಿ ಕಾಂಗ್ರೆಸ್‌ನ ಎಲ್ಲ ನಾಯಕರು ಈ ರೀತಿ ಅಕ್ರಮವಾಗಿ ಹಣ ಸಂಪಾದಿಸಿದ್ದಾರೆ. ದೇಶ ಅಭಿವೃದ್ಧಿಯಲ್ಲಿ ಹಿಂದುಳಿಯಲು ಭ್ರಷ್ಟಾಚಾರವೇ ಕಾರಣವಾಗಿದೆ. ದೇಶದ ಅಭಿವೃದ್ಧಿಗೆ ಬಳಸಬೇಕಾದ ಹಣವನ್ನು ಲೂಟಿ ಮಾಡಿ ದೇಶ ವಿರೋಧಿ ಶಕ್ತಿಗಳ ಬಲಪಡಿಸುವ ಕೆಲಸಕ್ಕೆ ಉಪಯೋಗಿಸುವ ಸಾಧ್ಯತೆ ಹೆಚ್ಚಿದೆ ಎಂದು ದೂರಿದರು.
ಧೀರಜ್ ಸಾಹು ಕಾಂಗ್ರೆಸ್‌ನ ಸೋನಿಯ ಗಾಂಧಿ ಅವರ ನಿಕಟವರ್ತಿ ಆಗಿದ್ದು, ಕಾನೂನಿಂದ ಸುಲಭವಾಗಿ ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಪಾರದರ್ಶಕ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ರಾಷ್ಟ್ರಪತಿ ಅವರಿಗೆ ಮನವಿ ಮಾಡಿದರು.
ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಲೋಹಿತ್ ಜಂಬರ್ಡಿ, ಶರತ್ ಭೂಷಣ್, ಮಣಿಕಂಠ, ವೇದಾವತಿ, ರತ್ನಾ ಪ್ರಕಾಶ್, ವಿಜಯಲಕ್ಷ್ಮಿ, ಅಂಜನಪ್ಪ, ಅನ್ನಪೂರ್ಣ ಇತರರಿದ್ದರು.