ಕಾಂಕ್ರೀಟ್ ರಸ್ತೆ ಕಾಮಗಾರಿ ಪರಿಶೀಲನೆ

21Kush02
Published on

ಕುಶಾಲನಗರ: ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ನವಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದ ಅನುದಾನದಡಿ 50 ಲಕ್ಷ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಸ್ಥಳೀಯ ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಭಾನುವಾರ ಪರಿಶೀಲನೆ ನಡೆಸಿದರು.


ಕೂಡುಮಂಗಳೂರು ಗ್ರಾ.ಪಂ ನವಗ್ರಾಮವು ಗುಡ್ಡಗಳಿಂದ ಕೂಡಿದ್ದು, ಸೂಕ್ತವಾದ ರಸ್ತೆಯಿಲ್ಲದೆ ಸಾರ್ವಜನಿಕರಿಗೆ ಸಮಸ್ಯೆಯುಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯ ಗ್ರಾ.ಪಂ ಸದಸ್ಯರ ಆಸಕ್ತಿಯಿಂದ ಹಾಗೂ ಶಾಸಕರ ಸಹಕಾರದಿಂದ ನವಗ್ರಾಮದಲ್ಲಿ 50 ಲಕ್ಷ ರೂ.ಗಳ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುತ್ತಿದೆ. ನವಗ್ರಾಮದ ನ್ಯಾಯ ಬೆಲೆ ಅಂಗಡಿ ಬಳಿಯಿಂದ ನಾಲ್ಕು ಮೀಟರ್ ಅಗಲದ ಸುಮಾರು 500 ಮೀಟರ್ ಉದ್ದದ ಕಾಂಕ್ರೀಟ್ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ.


ಸದಸ್ಯ ಕೆ.ಬಿ.ಶಂಶುದ್ದೀನ್ ಮಾತನಾಡಿ, ನವಗ್ರಾಮದಲ್ಲಿ ಈಗಾಗಲೇ ಪಂಚಾಯಿತಿ ವತಿಯಿಂದ ಸಾಕಷ್ಟು ಅನುದಾನವನ್ನು ವ್ಯಯಿಸಲಾಗಿದೆ. 15ನೇ ಹಣಕಾಸು, ಪಂಚಾಯಿತಿ ನಿಧಿ, ತಾಪಂ, ನರೇಗಾ, ಶಾಸಕರ ಅನುದಾನ ಹಾಗೂ ಕಾವೇರಿ ನೀರಾವರಿ ನಿಗಮದ ಅನುದಾನ ಸೇರಿದಂತೆ ಅಂದಾಜು ಒಂದು ಕೋಟಿಯಷ್ಟು ಕಾಮಗಾರಿ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ನವಗ್ರಾಮವನ್ನು ಇನ್ನಷ್ಟು ಅಭಿವೃದ್ಧಿಪಡಿಸಲಾಗುವುದು. ನವಗ್ರಾಮ ಹಾಗೂ ಬಸವೇಶ್ವರ ಬಡಾವಣೆಯಲ್ಲಿ ಸುಮಾರು 50 ಕ್ಕೂ ಹೆಚ್ಚು ಕುಟುಂಬಗಳು ಗುಡ್ಡ ಕುಸಿಯುವ ಆತಂಕದಲ್ಲಿ ಜೀವಿಸುತ್ತಿದ್ದು, ಕ್ಷೇತ್ರ ಶಾಸಕರು ಗಮನಹರಿಸಿ ತಡೆಗೋಡೆ ನಿರ್ಮಿಸಿಕೊಟ್ಟಲ್ಲಿ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಲಿದೆ. ಮಳೆಗಾಲದಲ್ಲಿ ಆಗಾಗ ಗುಡ್ಡ ಕುಸಿತ ಹಾಗೂ ಮನೆ ಮೇಲೆ ಬಂಡೆ ಉರುಳುವ ಪ್ರಕರಣಗಳು ನಡೆಯುತ್ತಿರುತ್ತವೆ. ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿಗಳು ಗಮನಹರಿಸುವಂತೆ ಸದಸ್ಯ ಕೆ.ಬಿ.ಶಂಶುದ್ದೀನ್ ಒತ್ತಾಯಿಸಿದರು.


ನವಗ್ರಾಮದ ನಿವಾಸಿಗಳಾದ ದೇವರಾಜ್, ಸ್ವಾಮಿ, ಪ್ರಕಾಶ್, ಸಫಿಯಾ, ಪ್ರಿಯ, ಪಾರ್ವತಮ್ಮ ಮತ್ತು ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net